ನ್ಯೂಸ್ ನಾಟೌಟ್: ಟೈಟಾನಿಕ್ (titanic) ಅವಶೇಷಗಳ ನೋಡಲು ಐವರು ಪ್ರವಾಸಿಗರನ್ನು ಹೊತ್ತೊಯ್ದು ಬಳಿಕ ನಾಪತ್ತೆಯಾದ ಸಬ್ ಮೆರಿನ್ನ ಅವಶೇಷಗಳು ರಕ್ಷಣಾ ತಂಡಕ್ಕೆ ಸಿಕ್ಕಿದ್ದು, ಅದನ್ನು ಸಮುದ್ರ ತೀರಕ್ಕೆ ಎಳೆದು ತರಲಾಗಿದೆ. ಅದರ ಮೊದಲ ಫೋಟೋಗಳನ್ನು ಅಸೋಸಿಯೇಟೆಡ್ ಪ್ರೆಸ್ ಬಿಡುಗಡೆ ಮಾಡಿದೆ.
ಈ ಜಲಂತರ್ಗಾಮಿ ನೌಕೆ ಐವರು ಪ್ರವಾಸಿಗರನ್ನು ಸಮುದ್ರದಾಳದಲ್ಲಿರುವ ಟೈಟಾನಿಕ್ ಅವಶೇಷಗಳನ್ನು ನೋಡಲು ಕರೆದೊಯ್ದಿತ್ತು. ಆದರೆ ಅಟ್ಲಾಂಟಿಕಾದ ಸಮುದ್ರ ತೀರದಿಂದ ಹೊರಟ ಸ್ವಲ್ಪ ಹೊತ್ತಿನಲ್ಲಿಯೇ ಈ ನೌಕೆ ಸಂಪರ್ಕ ಕಳೆದುಕೊಂಡಿತ್ತು. ಇದಾದ ಬಳಿಕ ಕೆನಡಾ, ಅಮೆರಿಕಾ, ಬ್ರಿಟನ್ ದೇಶಗಳ ರಕ್ಷಣಾ ತಂಡಗಳು ಈ ಐವರಿಗೆ ತೀವ್ರ ಶೋಧ ನಡೆಸಿದ್ದರು. ಆದರೂ ಅವರು ಪತ್ತೆಯಾಗಿರಲಿಲ್ಲ. ನಂತರದಲ್ಲಿ ಸಬ್ಮೆರಿನ್ನ ಅವಶೇಷ ಪತ್ತೆಯಾಗಿದ್ದು, ಅದನ್ನೀಗ ರಕ್ಷಣಾ ತಂಡ ಸಾಗರದಿಂದ ಸಮುದ್ರ ತೀರಕ್ಕೆ ತಂದಿಳಿಸಿದೆ ಎಂದು ವರದಿ ತಿಳಿಸಿದೆ.
ಕಳೆದ ವಾರ ಐವರು ಪ್ರವಾಸಿಗರನ್ನು ಹೊತ್ತೊಯ್ದ ಈ ಪುಟ್ಟ ಸಬ್ಮೆರ್ಸಿಬಲ್ (ಸಬ್ಮೆರಿನ್) ನಾಪತ್ತೆಯಾದ ನಂತರ ಅವರ ಪತ್ತೆಗಾಗಿ ದೊಡ್ಡಮಟ್ಟದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿತ್ತು. ಈ ಪುಟ್ಟ ಜಲಾಂತರ್ಗಾಮಿಯಲ್ಲಿ ಬ್ರಿಟನ್ನ ಉದ್ಯಮಿ ಸಾಹಸಿ ಹಮಿಶ್ ಹಾರ್ಡಿಂಗ್, ಟೈಟಾನಿಕ್ ತಜ್ಞ ಹಾಗೂ ಫ್ರಾನ್ಸ್ನ ಆಳ ಸಮುದ್ರ ಶೋಧಕ ಪೌಲ್-ಹೆನ್ರಿ ನರ್ಗೆಲೆಟ್, ಪಾಕಿಸ್ತಾನ ಮೂಲದ ಅತ್ಯಂತ ಶ್ರೀಮಂತ ಉದ್ಯಮಿ ಶಹಜಾದಾ ದಾವೂದ್, ದಾವೂದ್ ಪುತ್ರ ಸುಲೇಮಾನ್ ದಾವೂದ್ ಮತ್ತು ಓಷನ್ಗೇಟ್ ಸಿಇಒ ಸ್ಟಾಕ್ಟನ್ ರಶ್ ಈ ಪುಟ್ಟ ಸಬ್ಮೆರಿನ್ನಲ್ಲಿದ್ದರು.
ಅಮೆರಿಕಾದ ಕೋಸ್ಟ್ ಗಾರ್ಡ್ ಮತ್ತು ಇತರ ಸಂಸ್ಥೆಗಳ ಅತ್ಯುತ್ತಮ ಹುಡುಕಾಟ ಪ್ರಯತ್ನಗಳ ಹೊರತಾಗಿಯೂ, ಗುರುವಾರ ಜೂನ್ 22ರಂದು ಈ ಸಬ್ಮೆರಿನ್ನ ಶೋಧದ ಪ್ರದೇಶದಲ್ಲಿ ಅದರ ಅವಶೇಷಗಳು ಕಂಡುಬಂದಿದ್ದವು. ಹೀಗಾಗಿ ಟೈಟಾನ್ ಹೆಸರಿನ ಈ ನೌಕೆಯು ಸ್ಫೋಟಗೊಂಡಿದೆ ಹಾಗಾಗಿ ಹಡಗಿನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಕೋಸ್ಟ್ ಗಾರ್ಡ್ ಘೋಷಣೆ ಮಾಡಿತ್ತು. ಸದ್ಯ ಈ ಟೈಟಾನ್ ಸಬ್ಮೆರಿನ್ನ ಅವಶೇಷಗಳನ್ನು ರಕ್ಷಣಾ ತಂಡ ಸಮುದ್ರದಿಂದ ಹೊರಗೆ ತೆಗೆದಿದ್ದು, ಅದರ ಫೋಟೋವನ್ನು ಬಿಡುಗಡೆಗೊಳಿಸಿದೆ.