ನ್ಯೂಸ್ ನಾಟೌಟ್: ದುರಂತ ಅಂತ್ಯ ಕಂಡು ಸಮುದ್ರದ ಆಳದಲ್ಲಿ ಇಂದಿಗೂ ಸಾಕ್ಷಿಯಾಗಿ ಉಳಿದಿರುವ ಟೈಟಾನಿಕ್ ಹಡಗನ್ನು ನೋಡಲು ಹೋದವರು ಇದುವರೆಗೆ ವಾಪಸ್ ಆಗಿಲ್ಲ. ಇವರಿಗಾಗಿ ಇದೀಗ ತೀವ್ರ ಶೋಧ ನಡೆಸಲಾಗುತ್ತಿದೆ.
OceanGate Expeditions ಒಡೆತನದ ಟೈಟಾನಿಕ್ ಎಂಬ ಹೆಸರಿನ ಪ್ರವಾಸಿ ಸಬ್ಮರ್ಸಿಬಲ್ ಜಲ ನೌಕೆ ಪ್ರವಾಸಿಗರನ್ನು ಕರೆದುಕೊಂಡು ಟೈಟಾನಿಕ್ ಹಡಗು ಮುಳುಗಿದ್ದ ಜಾಗದ ಆಳಕ್ಕೆ ಹೋಗಿತ್ತು. ಈ ಹಡಗಿನಲ್ಲಿ ಹೀಗೆ ಪ್ರಯಾಣಿಸುವುದಕ್ಕೆ ಒಂದು ಟಿಕೇಟ್ಗೆ ಬರೋಬ್ಬರಿ 2.28 ಕೋಟಿ ರೂ. ಆಗಿದೆ. ಕಳೆದ ಭಾನುವಾರ (ಜೂನ್ 20) ಬೆಳಗ್ಗೆ, ಟೈಟಾನಿಕ್ ಹಡಗು ದುರಂತದ ವೀಕ್ಷಣೆಗೆ ಹೊರಟಿತ್ತು. 5 ಸಿಬ್ಬಂದಿಯೊಂದಿಗೆ ಹೊರಟಿದ್ದ ಈ ನೌಕೆ, ಸುಮಾರು ಎರಡು ಗಂಟೆಗಳ ಬಳಿಕ ಸಂಪರ್ಕ ಕಳೆದುಕೊಂಡಿದೆ. ನಂತರ ಸಂಪರ್ಕ ಸಾಧಿಸಲು ಎಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ ಎಂದು ಅಮೆರಿಕ ಕೋಸ್ಟ್ ಗಾರ್ಡ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಉತ್ತರ ಅಟ್ಲಾಂಟಿಕ್ನ ಕೇಪ್ ಕೋಡ್ನಿಂದ ಸುಮಾರು 900 ಮೈಲಿ ದೂರ ಪ್ರಯಾಣಿಸುತ್ತಿದ್ದಂತೆ ಸಂಪರ್ಕ ಕಳೆದುಕೊಂಡಿದೆ. ಅದು ಸುಮಾರು 13000 ಫೀಟ್ ನೀರಿನ ಆಳಕ್ಕೆ ಹೋಗಿದೆ ಎಂದು ಅಂದಾಜಿಸಲಾಗಿದೆ. ಈ ಜಲಂತರ್ಗಾಮಿ ನಿನ್ನೆ ಸಂಜೆ ವೇಳೆಗೆ ಕೇವಲ 40 ಗಂಟೆಗಿಂತ ಕಡಿಮೆ ಅವಧಿಗೆ ಉಸಿರಾಡಲು ಆಕ್ಸಿಜನ್ ಇದೆ. ಅದಕ್ಕಿಂತ ಹೆಚ್ಚಿನ ಗಾಳಿಯನ್ನು ನೌಕೆ ಹೊಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆಯವರೆಗೆ ಅಮೆರಿಕ ಕೋಸ್ಟ್ ಗಾರ್ಡ್, ಕೆನಡಿಯನ್ ಕೊಸ್ಟ್ ಗಾರ್ಡ್, ಅಮೆರಿಕ ನೌಕ ಸೇನೆ ಮತ್ತು ಏರ್ ನ್ಯಾಷನಲ್ ಗಾರ್ಡ್ ಸಿಬ್ಬಂದಿ ಸೇರಿ ಒಟ್ಟು 76000 ಸ್ಕ್ವೇರ್ ಮೈಲು ದೂರದವರೆಗೆ ಕೂಂಬಿಂಗ್ ಮಾಡಿದೆ. ಇದುವರೆಗೂ ನೌಕೆ ಇರುವ ಯಾವುದೇ ಸುಳಿವು ಸಿಗಲಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇತ್ತೀಚೆಗಿನ ವರದಿ ಪ್ರಕಾರ, ಶೋಧಕಾರ್ಯದ ವೇಳೆ ಜೋರಾದ ಸೌಂಡ್ ಒಂದು ಕೇಳಿಸಿದೆ ಅಂತಾ ವರದಿಯಾಗಿದೆ. ಕೇವಲ ಜಲಮಾರ್ಗದಲ್ಲಿ ಮಾತ್ರವಲ್ಲದೇ, ವೈಮಾನಿಕ ವ್ಯವಸ್ಥೆಗಳ ಮೂಲಕವೂ ಶೋಧಕಾರ್ಯ ನಡೆಯುತ್ತಿದೆ. ಅಮೆರಿಕದ ವಿಶೇಷ ವಿಮಾನಗಳಾದ C-130, P8 Poseidon ಅವುಗಳ ಮೂಲಕವೂ ಹುಡುಕಾಟ ನಡೆಯುತ್ತಿದೆ. ಅತ್ಯಂತ ದೊಡ್ಡ ಮತ್ತು ವೈಭವೋಪೇತ ಟೈಟಾನಿಕ್ ಹಡಗು ಸಮುದ್ರದಲ್ಲಿ ಮುಳುಗಲ್ಲ ಎಂದು ಹೇಳಲಾಗಿತ್ತು. ಆದರೆ 1912ರಲ್ಲಿ ತನ್ನ ಚೊಚ್ಚಲ ಯಾನದಲ್ಲೇ ಮುಳುಗಿತ್ತು. ಈ ವೇಳೆ 1500ಕ್ಕೂ ಹೆಚ್ಚು ಜನರು ದುರಂತದಲ್ಲಿ ಮೃತಪಟ್ಟಿದ್ದರು.