ನ್ಯೂಸ್ ನಾಟೌಟ್: ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಭೀಕರ ದುರಂತವು ಇಡೀ ದೇಶದ ಜನರ ಕಣ್ಣಾಲಿಗಳು ತೇವಗೊಳ್ಳುವಂತೆ ಮಾಡಿವೆ. ಬಾಲಸೂರ್ನಲ್ಲಿ ನಡೆದ ದುರಂತದ ಬೆನ್ನಲ್ಲೇ ಮೃತರ ಶವವನ್ನು ಅಗೌರವದಿಂದ ನಡೆಸಲಾಗುತ್ತಿದೆ ಅನ್ನುವ ಸುದ್ದಿಗಳು ವರದಿಯಾಗುತ್ತಿದೆ. ಈ ಬೆನ್ನಲ್ಲೇ ಕೆಲವು ವರ್ಷಗಳ ಹಿಂದೆ ಸುಳ್ಯ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನಡೆದಿದ್ದ ಭೀಕರ ಬಸ್ ದುರಂತದ ವಿಚಾರ ಮುನ್ನೆಲೆಗೆ ಬಂದಿದೆ. ಅಂದು ದುರಂತದಲ್ಲಿ ಮಡಿದ ತಮಿಳುನಾಡಿಗೆ ಸೇರಿದ ಬಸ್ನ ಪ್ರಯಾಣಿಕರ ಶವವನ್ನು ಗೋಣಿಚೀಲದಲ್ಲಿ ಪ್ಯಾಕ್ ಮಾಡಿ ಅವರ ಊರಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಕಳಿಸಿಕೊಡಲಾಗಿತ್ತು. ಅಂದಿನ ಗೃಹ ಮಂತ್ರಿಗಳು ತೋರಿದ ಮುತುವರ್ಜಿ ಬಗ್ಗೆ ಪ್ರತ್ಯಕ್ಷದರ್ಶಿ ಸುಳ್ಯದ ಜವುಳಿ ಉದ್ಯಮಿ ಎಂ.ಬಿ ಸದಾಶಿವ ಅವರು ಫೇಸ್ಬುಕ್ನಲ್ಲಿ ಹೇಳಿಕೊಂಡಿದ್ದಾರೆ. ಅವರು ಅಂದಿನ ಘಟನೆಯನ್ನು ಹೇಗೆ ನೆನಪಿಸಿಕೊಂಡ್ರು ಅನ್ನುವುದರ ವಿವರ ಇಲ್ಲಿದೆ.
ಎಂಬಿ ಸ್ಮರಿಸಿದ ಘೋರ ಬಸ್ ದುರಂತದ ಕಥೆ:
ಬಾಲ ಸೊರ್ ನಲ್ಲಿ ನಡೆದ ರೈಲು ದುರಂತದಲ್ಲಿ ಮಡಿದವರ ಪಾರ್ಥೀವ ಶರೀರವನ್ನು ಅಗೌರವದಿಂದ ಎಸೆಯಲಾಗುತ್ತಿದೆ ಎಂಬ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ಬೇಸರವಾಯಿತು. 300ಕ್ಕೂ ಹೆಚ್ಚು ಸಾವು ಸಾವಿರಾರು ಗಾಯಾಳುಗಳ ಆಕ್ರಂದನ ಮುಗಿಲು ಮುಟ್ಟಿದೆ. ನನ್ನ ಬದುಕಿನಲ್ಲಿ ಇಂತಹ ದುರ್ಘಟನೆಯಲ್ಲಿ ಭಾಗಿಯಾಗಿ ಹೆಣ ಎತ್ತಿದ ಮರೆಯಲಾಗದ ಸಂದರ್ಭದ ಬಗ್ಗೆ ಈಗ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಕರ್ನಾಟಕದಲ್ಲಿ ಜನತಾ ಪಕ್ಷ ಸರಕಾರ ಅಧಿಕಾರಕ್ಕೆ ಬಂದಿತ್ತು. ಪಿಜಿ ಆರ್. ಸಿಂದ್ಯಾ ಗೃಹ ಸಚಿವರು. ಜಯಪ್ರಕಾಶ್ ಹೆಗ್ಡೆ ಮೀನುಗಾರಿಕಾ ಸಚಿವರಾಗಿದ್ದರು. ಸುಬ್ರಮಣ್ಯ ಕ್ಕೆ ಯಾತ್ರಾರ್ಥಿ ಗಳಾಗಿ ಬಂದ ಬಸ್ ನಡುಗಲ್ಲುವಿನ ತಿರುವಿನಲ್ಲಿ ರಾತ್ರಿ ಆಳಕ್ಕೆ ಬಿದ್ದು 23 ಮಂದಿ ಮೃತರಾಗಿದ್ದರು. ಆಗ ಈಗಿನಂತೆ ಟಿವಿ ಮೊಬೈಲ್ ಗಳಿರಲಿಲ್ಲ. ಆದರೂ ಮೇಲೆ ಹೇಳಿದ ಸಚಿವರು ಧಾವಿಸಿ ಬಂದರು. ನಾವು ಜನತಾ ಪಕ್ಷದ ಕಾರ್ಯಕರ್ತರು ಒಂದಾಗಿ ರಾತ್ರಿ ಪೂರ್ತಿ ಗಾಯಳುಗಳನ್ನು ತಂದು ಉಪಚರಿಸುವ, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ಗೆ ಸಿದ್ದಪಡಿಸುವ ವ್ಯವಸ್ಥೆ ಮಾಡಿದ್ದೆವು. ಆಗ ಸರಕಾರಿ ವೈದ್ಯರಿಗೆ ನೆರವಾಗಲು Dr. ಸುಗುಣ ಗೌಡರು ಸೇರಿಕೊಂಡರು. ತಮಿಳುನಾಡಿನ ಮೃತರ ಮನೆಗಳಿಗೆ ಟ್ರಂಕ್ ಕಾಲ್ ಮಾಡಿ ತಿಳಿಸಿದೆವು. ಅಲ್ಲಿಂದ ಬಂದು ಮೃತ ದೇಹ ಕೊಂಡೊಯ್ಯಲು 2 ದಿನ ಬೇಕಾಗಬಹುದೆಂಬ ಕಾರಣಕ್ಕೆ ಎಲ್ಲ ಮೃತ ದೇಹಗಳನ್ನು ಗೋಣಿಯಲ್ಲಿ ಪ್ಯಾಕ್ ಮಾಡಿದೆವು. ಕೆ ಎಸ್ ಆರ್ ಟಿ ಸಿ ಬಸ್ ಒಂದನ್ನು ಸರಕಾರ ಕೊಟ್ಟಿತು. ಅದರಲ್ಲೇ ಎಲ್ಲಾ ಮೃತ ದೇಹವನ್ನು ಶ್ರೀಲಂಕಾ ಕಾರ್ಮಿಕ ಸ್ನೇಹಿತರೊಂದಿಗೆ ಕಳುಹಿಸಲಾಯಿತು. ಗೋಬಿ ಚೆಟ್ಟಿ ಪಾಳ್ಯಮ್ ಅನ್ನುವ ಊರಿಗೇ ಸೇರಿದ ಬಸ್ ಹಾಗೂ ಪ್ರಯಾಣಿಕರು ಅವರಾಗಿದ್ದರು. ಆ ಬಳಿಕ ಅವರೆಲ್ಲರೂ ನನ್ನ ವಿಳಾಸಕ್ಕೆ ತಮಿಳ್ ನಲ್ಲಿ ಪತ್ರ ಬರೆದು ಡೆತ್ ಸರ್ಟಿಫಿಕೇಟ್, ವುನ್ಡ್ ಸರ್ಟಿಫಿಕೇಟ್ ಕೇಳಿಕೊಳ್ಳುತ್ತಿದ್ದರು. ಇಂತಹ ದುರ್ಘಟನೆ ನಡೆದಾಗ ನನಗೆ ನೆನಪಾಗುವುದು ಸುಬ್ರಮಣ್ಯದ ದುರಂತ. ನಾವು ಆ ಶವಗಳನ್ನು ಅತ್ಯಂತ ಗೌರವದಿಂದ ಸರಿಯಾಗಿ ಪ್ಯಾಕ್ ಮಾಡಿದ್ದು ನಮ್ಮ ಕೈಗಳಿಂದಲೇ. ನನ್ನ ಬಯೋ ಡಾಟಾ ದಲ್ಲಿ ಇದು ಸೇರಿಲ್ಲ ಅಷ್ಟೇ’ ಎಂದು ಎಂ.ಬಿ ಸದಾಶಿವ ಸ್ಮರಿಸಿಕೊಂಡಿದ್ದಾರೆ.