ನ್ಯೂಸ್ ನಾಟೌಟ್ : ರಿಕ್ಷಾ ಚಾಲಕರೋರ್ವರು ಮೂರು ದಿನದ ಹಿಂದೆ ಬ್ರೈನ್ ಎಮರೇಜ್ಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿರುವ ಘಟನೆ ವರದಿಯಾಗಿದೆ.ಜೂ.22ರಂದು ಸಂಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ. ಕಮಲಾಕ್ಷ ಗೌಡ(44ವ.)ಮೃತ ದುರ್ದೈವಿ.
ಕಡಬದ ಆಲಂಕಾರು ಗ್ರಾಮದ ನೆಕ್ಕಿಲಾಡಿ ನಿವಾಸಿಯಾಗಿದ್ದು, ಆಲಂಕಾರು ಆದರ್ಶ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯರು ಕೂಡ ಆಗಿದ್ದರು.ಕಮಲಾಕ್ಷ ಗೌಡರವರು ಜೂ.20ರಂದು ಬೆಳಿಗ್ಗೆ ಮನೆಯಲ್ಲಿ ಬ್ರೈನ್ ಎಮರೇಜ್ಗೆ ತುತ್ತಾಗಿ ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದರು.ಹೀಗಾಗಿ ಅವರ ಸಹೋದರ ತಕ್ಷಣ ಆಲಂಕಾರಿನ ಕ್ಲಿನಿಕ್ಗೆ ಕರೆತಂದು ಬಳಿಕ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಕರೆದೊಯ್ದಿದ್ದರು.
ಅಲ್ಲಿನ ವೈದ್ಯರ ಸಲಹೆ ಮೇರೆಗೆ ಅದೇ ದಿನ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಕೆಎಂಸಿ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕಮಲಾಕ್ಷ ಗೌಡರವರು ಜೂ.22ರಂದು ಸಂಜೆ ಮೃತಪಟ್ಟಿದ್ದಾರೆ. ಕಮಲಾಕ್ಷ ಗೌಡರವರು ಕಳೆದ 5 ವರ್ಷಗಳಿಂದ ಆಲಂಕಾರಿನಲ್ಲಿ ಬಾಡಿಗೆ ರಿಕ್ಷಾ ಓಡಾಟ ನಡೆಸುತ್ತಿದ್ದರು. ಮೃತರು ಪತ್ನಿ ಕೀರ್ತಿಕಾ, ಪುತ್ರಿಯರಾದ ಆಶಿಕಾ, ನಿರೀಕ್ಷಾ, ಜಿಶಾ, ಸಹೋದರರಾದ ರುಕ್ಮಯ ಗೌಡ, ಕುಶಾಲಪ್ಪ ಗೌಡ, ರಾಧಾಕೃಷ್ಣ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.