ನ್ಯೂಸ್ ನಾಟೌಟ್: ಸಮುದ್ರದಾಳದಲ್ಲಿ ಇತಿಹಾಸದ ಪುಟ ಸೇರಿದ್ದ ಟೈಟಾನಿಕ್ ಹಡಗಿನ ಅವಶೇಷ ವೀಕ್ಷಿಸಲು ಹೋಗಿದ್ದ ಐದು ಮಂದಿ ದುರಂತ ಸಾವಿಗೀಡಾದ ಎಲ್ಲ ಕಡೆ ಚರ್ಚೆಯಲ್ಲಿದೆ. ಈ ನಡುವೆ ಸಾವಿಗೀಡಾದ ವ್ಯಕ್ತಿ
ಗಳ ಪೈಕಿ ಸಾಹಸಮಯ ಯಾತ್ರೆಗೆ ಹೊರಟಿದ್ದ ಪಾಕಿಸ್ತಾನದ ಬಾಲಕ ವಿಶ್ವ ದಾಖಲೆ ನಿರ್ಮಿಸಲು ಹೊರಟಿದ್ದ ಅನ್ನುವ ರೋಚಕ ವರದಿಯೊಂದು ಹೊರಬಿದ್ದಿದೆ.
ಅತ್ಯಂತ ದುಭಾರಿ ಯಾತ್ರೆಯಲ್ಲಿ ಬರೋಬ್ಬರಿ ತಲಾ 2.50 ಕೋಟಿ ರೂ. ಟಿಕೆಟ್ ಖರೀದಿಸಿ ಟೈಟಾನ್ ಜಲಾಂತರ್ಗಾಮಿ ನೌಕೆಯಲ್ಲಿ ಪಾಕ್ ನ 17 ವರ್ಷದ ಸುಲೇಮಾನ್ ಕೂಡ ತೆರಳಿದ್ದರು. ಈತನ ಪ್ರಯಾಣಕ್ಕೆ ಆತನ ತಂದೆ ಪಾಕ್ನ ಬಹುದೊಡ್ಡ ಉದ್ಯಮಿ ಶಹಜಾದ್ ಕೂಡ ಸಾಥ್ ನೀಡಿದ್ದರು. ಆದರೆ ಇಬ್ಬರ ಪ್ರಯಾಣ ಇದೀಗ ದುರಂತ ಅಂತ್ಯದಲ್ಲಿ ಕೊನೆಗೊಂಡಿದೆ ಅನ್ನುವುದು ನೋವಿನ ವಿಚಾರವಾಗಿದೆ. ಅಂದ ಹಾಗೆ ಸಾವಿಗೂ ಮೊದಲು ಸುಲೇಮಾನ್ ವಿಶ್ವದಾಖಲೆಯ ಕನಸು ಕಂಡಿದ್ದ. ಹೌದು, ರುಬಿಕ್ ಕ್ಯೂಬ್ ಅನ್ನು ತೆಗೆದುಕೊಂಡು ಹೋಗಿ ಅದರಲ್ಲಿರುವ ಒಗಟನ್ನು ಟೈಟಾನಿಕ್ ಹಡಗು ಇದ್ದ ಅವಶೇಷದ ಸಮೀಪದಿಂದ ಬಗೆ ಹರಿಸುವ ಯೋಜನೆ ಹಾಕಿಕೊಂಡಿದ್ದ. ಇತಿಹಾಸ ಕ್ಷಣಗಳನ್ನು ಸೆರೆ ಹಿಡಿಯುವುದಕ್ಕೆ ಆತನ ತಂದೆ ಕ್ಯಾಮೆರಾ ಹಿಡಿದುಕೊಂಡು ಹೋಗಿದ್ದರು. ಈ ಬಗ್ಗೆ ಬಿಬಿಸಿಗೆ ಪ್ರತಿಕ್ರಿಯಿಸಿರುವ ಸುಲೇಮಾನ್ ತಾಯಿ ಕ್ರಿಸ್ಟಿನ್ ದಾವೂದ್ , “ಸಮುದ್ರದ ಮೇಲ್ಮೈಯಿಂದ 19,300 ಮೀಟರ್ ಆಳದಲ್ಲಿ ಈ ಒಗಟನ್ನು ಪರಿಹರಿಸಲು ಪ್ರಯತ್ನಿಸಲು ತನ್ನ 17 ವರ್ಷದ ಮಗ ಸುಲೇಮಾನ್ ತುಂಬಾ ಉತ್ಸುಕನಾಗಿದ್ದ” ಎಂದು ತಿಳಿಸಿದ್ದಾರೆ. ಈ ಮಧ್ಯೆ, ಉದ್ಯಮಿಯಾದ ಅವರ ತಂದೆ ಶಹಜಾದಾ, ಟೈಟಾನಿಕ್ ಅವಶೇಷಗಳನ್ನು ನೋಡುವ ನಿರೀಕ್ಷೆಯಲ್ಲಿ ಮಗುವಿನಂತೆ ತುಂಬಾ ಉತ್ಸುಕರಾಗಿದ್ದರು ಎನ್ನಲಾಗಿದೆ. ಅವರು ಅದಾಗಲೇ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ.ತನ್ನ ಮಗ ಪ್ರಸಿದ್ಧ ರೂಬಿಕ್ಸ್ ಕ್ಯೂಬ್ ಒಗಟನ್ನು ಎಷ್ಟು ಪ್ರೀತಿಸುತ್ತಿದ್ದನೆಂದರೆ, ಅವನು ಅದನ್ನು ಎಲ್ಲೆಡೆ ತನ್ನೊಂದಿಗೆ ತೆಗೆದುಕೊಂಡು ಹೋಗುತ್ತಿದ್ದ. ಅದಲ್ಲದೇ ಆತ ಕೇವಲ 12 ಸೆಕೆಂಡುಗಳಲ್ಲಿ ರೂಬಿಕ್ಸ್ ಕ್ಯೂಬ್ ಪರಿಹರಿಸುವ ಮೂಲಕ ನೋಡುಗರನ್ನು ಬೆರಗುಗೊಳಿಸುತ್ತಿದ್ದ ಎಂದು ಕ್ರಿಸ್ಟೀನ್ ದಾವೂದ್ ಹೇಳಿದರು.