ನ್ಯೂಸ್ ನಾಟೌಟ್: ಎಂಬಿಬಿಎಸ್ ಕೋರ್ಸ್ ಪೂರ್ತಿಗೊಳಿಸಿ ಗ್ರಾಮೀಣ ಸೇವೆಯಂಗವಾಗಿ ಸುಳ್ಯ ತಾಲೂಕು ಆಸ್ಪತ್ರೆಗೆ ನೇಮಕಗೊಂಡಿದ್ದ ಯುವ ವೈದ್ಯೆಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡು ಜಿಲ್ಲೆಯ ಬದಿಯಡ್ಕ ಸಮೀಪದ ನೀರ್ಚಾಲಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವೈದ್ಯೆಯನ್ನು ಕನ್ಯಪ್ಪಾಡಿ ನಿವಾಸಿ ನಿವೃತ್ತ ಕ್ಯಾಂಪ್ಕೋ ಉದ್ಯೋಗಿ ಗೋಪಾಲಕೃಷ್ಣ ಭಟ್ ಅವರ ಪುತ್ರಿ ಯುವ ವೈದ್ಯೆ ಡಾ. ಪಲ್ಲವಿ ಜಿ.ಕೆ. (25) ಎಂದು ಗುರುತಿಸಲಾಗಿದೆ.
ಜೂ. 5ರಂದು ರಾತ್ರಿ ಊಟ ಮಾಡಿ ನಿದ್ದೆ ಮಾಡಿದ್ದ ಪಲ್ಲವಿ ಮಂಗಳವಾರ ಬೆಳಗ್ಗೆ ಎದ್ದಿರಲಿಲ್ಲ. ಇದರಿಂದ ಮನೆಯವರು ಕೊಠಡಿಯ ಬಾಗಿಲು ತೆರೆದು ನೋಡಿದಾಗ ಕಿಟಕಿ ಸರಳಿಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಧಾರವಾಡದ ಎಸ್ಡಿಎಂ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್ ಪೂರ್ತಿಗೊಳಿಸಿದ ಬಳಿಕ ಪಲ್ಲವಿ ರೂರಲ್ ಸರ್ವೀಸ್ನ ಅಂಗವಾಗಿ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ನೇಮಕಗೊಂಡಿದ್ದರು. ಬಳಿಕ ಎಂ.ಡಿ. ಕೋರ್ಸ್ನ ಪರೀಕ್ಷೆ ಬರೆಯಲು ಅಲ್ಲಿಂದ ರಜೆಯಲ್ಲಿ ತೆರಳಿದ್ದರು. ಪರೀಕ್ಷೆಯ ಬಳಿಕ ಮನೆಗೆ ಬಂದಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ತಿಳಿದು ಬಂದಿಲ್ಲ. ಬದಿಯಡ್ಕ ಪೊಲೀಸರು ಮೃತದೇಹದ ಮಹಜರು ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.