ನ್ಯೂಸ್ ನಾಟೌಟ್ : ”ರಾಜ್ಯದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ಹೊಂದಾಣಿಕೆ ಮಾಡಿಕೊಂಡಿದ್ದು, ಯಾರ ಮೇಲೆ ಯಾರೂ ಆರೋಪ ಮಾಡದಂತೆ ಒಂದು ಗೌಪ್ಯ ಒಡಂಬಡಿಕೆ ಮಾಡಿಕೊಂಡಂತೆ ವರ್ತಿಸುತ್ತಿದ್ದಾರೆ. ಬಹುಶಃ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿಯ ಅತಿರಥ ಮಹಾರಥರೇ ಶಾಮೀಲಾಗಿರಬಹುದು” ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ತಮ್ಮ ಪಕ್ಷದ ಹಿರಿಯ ನಾಯಕರ ವಿರುದ್ಧವೇ ಪ್ರತಾಪ್ ಸಿಂಹ ಘರ್ಜಿಸಿರುವುದು ಕುತೂಹಲಕ್ಕೆ ಕಾರಣವಾಗಿದ್ದು, ಹಲವು ಸಂಶಯಗಳನ್ನು ಮೂಡಿಸಿದೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ “ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ಹೊಂದಾಣಿಕೆ ಮಾಡಿಕೊಂಡಿರುವಂತೆ ಕಾಣುತ್ತದೆ. ಬಿಜೆಪಿಯವರು ಅಧಿಕಾರಕ್ಕೆ ಬಂದ ಕೂಡಲೇ ಅರ್ಕಾವತಿ ಹಗರಣ, ಡಿ ನೋಟಿಫಿಕೇಶನ್, ಕೆಂಪಣ್ಣ ಆಯೋಗದ ವರದಿ ಮುಂತಾದ ಪ್ರಕರಣಗಳನ್ನು ತೋರಿಸಿ, ಕಾಂಗ್ರೆಸ್ ನಾಯಕರನ್ನು ಹೆದರಿಸುತ್ತಾರೆ. ಕಾಂಗ್ರೆಸ್ಸಿನವರು ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಸರ್ಕಾರದಲ್ಲಿ ಕೇಳಿ ಬಂದಿದ್ದ ಆರೋಪಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಬೆದರಿಕೆಯನ್ನು ಹಾಕುತ್ತಾರೆ.
ಯಾರೂ ಯಾರ ವಿರುದ್ಧವೂ ತನಿಖೆ ಮಾಡಿಲ್ಲ. ಅದನ್ನು ನೋಡಿದರೆ, ಎರಡೂ ಪಕ್ಷದ ಹಿರಿಯ ನಾಯಕರು ಪರಸ್ಪರ ಹೊಂದಾಣಿಕೆ ರಾಜಕೀಯವನ್ನು ಮಾಡುತ್ತಿದ್ದಾರೆಂಬ ಅನುಮಾನಗಳು ಮೂಡುತ್ತಿವೆ” ಎಂದು ವಿರೋಧ ಪಕ್ಷದ ಜೊತೆ ಸ್ವಪಕ್ಷೀಯರ ಮೇಲೆಯೇ ಗಂಭೀರ ಆರೋಪ ಮಾಡಿದ್ದಾರೆ.