ನ್ಯೂಸ್ ನಾಟೌಟ್ : ರಾಜ್ಯಾದ್ಯಂತ ಮಹತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ‘ಶಕ್ತಿ ಯೋಜನೆ’ ಜಾರಿಗೆ ಬಂದಿದೆ. ಮಹಿಳೆಯರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳುತ್ತಿದ್ದು,ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ.ಈ ಮಧ್ಯೆಯೇ ಖಾಸಗಿ ಬಸ್ ಗಳಿಗಾಗಿ ಕಾಯುತ್ತಿದ್ದ ಮಹಿಳೆಯರೆಲ್ಲ ಸರಕಾರಿ ಬಸ್ ನಲ್ಲಿಯೇ ಓಡಾಡುತ್ತಿರುವ ಹಿನ್ನಲೆ ಖಾಸಗಿ ಬಸ್ ಸ್ಟ್ಯಾಂಡ್ ನಲ್ಲಿ ಜನವಿಲ್ಲ ಅನ್ನುವ ಕೂಗು ಕೇಳಿ ಬಂದಿದೆ.
ಹೌದು ,ಶಕ್ತಿ ಯೋಜನೆ ಯಾವಾಗ ಜಾರಿಯಾಯಿತೋ ಅಟೋ ಚಾಲಕರಿಗೆ,ಖಾಸಗಿ ಬಸ್ ಗಳಿಗೆ ನಷ್ಟವಾಗಬಹುದು ಎಂಬ ಮಾತು ಕೇಳಿ ಬಂದಿತ್ತು.ಖಾಸಗಿ ಬಸ್ ಸ್ಟ್ಯಾಂಡ್ ಗಳಲ್ಲಿ ಹಿಂದೆ ಜನ ತುಂಬಿ ತುಳುಕಾಡುತ್ತಿದ್ದು, ಇದೀಗ ಜನರಿಲ್ಲದೇ ಬಿಕೋ ಅನ್ನುತ್ತಿದೆ.ಶಕ್ತಿ ಯೋಜನೆ ಜಾರಿಯಾದ ಭಾನುವಾರ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ಗಳಲ್ಲಿ ಒಟ್ಟು 5,71,023 ಮಹಿಳೆಯರು ಪ್ರಯಾಣ ಮಾಡಿದ್ದಾರೆನ್ನುವ ಬಗ್ಗೆ ವರದಿಯಾಗಿತ್ತು. ಭಾನುವಾರ ಮಧ್ಯಾಹ್ನ 1ಕ್ಕೆ ಶಕ್ತಿ ಯೋಜನೆ ಉದ್ಘಾಟನೆಗೊಂಡಿತ್ತು. ಅಲ್ಲಿಂದ ರಾತ್ರಿ 12 ಗಂಟೆಯವರೆಗೆ ಪ್ರಯಾಣಿಸಿದ ಮಹಿಳೆಯರ ವಿವರವನ್ನು ಸಾರಿಗೆ ನಿಗಮ ನೀಡಿದ್ದು, ಒಟ್ಟು ₹ 1,40,22,878 ಅದರ ಮೌಲ್ಯವಾಗಿದೆ ಎಂದು ವರದಿ ನೀಡಿತ್ತು.
ರಾಜ್ಯದ ವಿವಿಧೆಡೆ ಬಸ್ ಫುಲ್ ರಶ್ ಆಗಿರುವುದರ ಬಗ್ಗೆಯೂ ವರದಿಯಾಗಿತ್ತು.ಕರಾವಳಿ ಭಾಗದಲ್ಲಿಯೂ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಸುಬ್ರಹ್ಮಣ್ಯ-ಧರ್ಮಸ್ಥಳ ಬಸ್ ಗಳಲ್ಲಿ ಜನ ತುಂಬಿ ತುಳುಕಾಡುತ್ತಿತ್ತು. ಇತ್ತ ಕೊಡಗು ಜಿಲ್ಲೆಯಲ್ಲಿಯೂ ‘ಶಕ್ತಿ’ ಯೋಜನೆ ಜಾರಿಗೆ ಬಂದ ನಂತರ 10 ಸಾವಿರಕ್ಕೂ ಅಧಿಕ ಮಂದಿ ಮಹಿಳೆಯರು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಸಂಚರಿಸಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ. ಇವರು ಟಿಕೆಟ್ ಪಡೆದ ಮೌಲ್ಯ ₹ 3.56 ಲಕ್ಷ ಎಂದು ಹೇಳಲಾಗಿದೆ.
ಹೀಗೆ ದಿನದಿಂದ ದಿನಕ್ಕೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಖಾಸಗಿ ಬಸ್ ಮಾಲೀಕರಲ್ಲಿ ಆತಂಕ ಮನೆ ಮಾಡಿದೆ.ದಿನ ನಿತ್ಯ ಆಫೀಸ್ ಕೆಲಸಕ್ಕಾಗಿಯೋ ,ಕೂಲಿ ಕೆಲಸಕ್ಕಾಗಿಯೋ ಹೋಗುವ ಮಹಿಳೆಯರೆಲ್ಲ ಖಾಸಗಿ ಬಸ್ ನಲ್ಲಿ ಸಂಚರಿಸುತ್ತಿದ್ದರು.ಇದಲ್ಲದೇ ಶಾಲಾ ವಿದ್ಯಾರ್ಥಿನಿಯರು ಕೂಡ ಖಾಸಗಿ ಬಸ್ ನಲ್ಲಿ ಓಡಾಡುತ್ತಿದ್ದರು.ಆದರೆ ಇದೀಗ ಕೆಎಸ್ ಆರ್ ಟಿ ಸಿ ಬಸ್ ಗಳಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿ ಕಂಡು ಬರುತ್ತಿದ್ದು, ಮಹಿಳೆಯರು ಈ ಕೆಎಸ್ಆರ್ಟಿಸಿ ಬಸ್ಗಳನ್ನೇ ಕಾದು ಪ್ರಯಾಣಿಸುತ್ತಿದ್ದಾರೆ. ದಿನ ಕಳೆದಂತೆ ಇನ್ನಷ್ಟು ಮಹಿಳೆಯರು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಸಂಚರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಕೊಡಗಿನಲ್ಲಿ ಇಲ್ಲಿಯವರೆಗೆ ಖಾಸಗಿ ಬಸ್ ಮಾಲೀಕರಿಗೆ ಶೇ 10.ರಷ್ಟು ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.