ನ್ಯೂಸ್ ನಾಟೌಟ್: ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಆಹಾರದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಇತ್ತೀಚೆಗೆ ವಿಶಾಖಪಟ್ಟಣ ಮತ್ತು ಹೈದರಾಬಾದ್ ನಡುವೆ ಸಂಚರಿಸುವ ವಂದೆ ಭಾರತ್ ರೈಲಿನಲ್ಲಿ ನೀಡಿದ ತಿಂಡಿಯಲ್ಲಿ ಕಡು ಕಪ್ಪು ಬಣ್ಣದ ಎಣ್ಣೆಯ ಅಂಶ ಇದ್ದ ಬಗ್ಗೆ ಪ್ರಯಾಣಿಕನೋರ್ವ ವಿಡಿಯೋ ಮಾಡಿ ಟ್ವೀಟ್ ಮಾಡಿದ್ದರು. ಈ ಘಟನೆ ಮಾಸುವ ಮುನ್ನವೆ ಮತ್ತೊಂದು ಅದೇ ರೀತಿಯ ಘಟನೆ ನಡೆದಿದೆ.
ಉತ್ತರ ಪ್ರದೇಶದ ಪ್ರಯಾಣಿಕನೊಬ್ಬ ತಮ್ಮ ಪ್ರಯಾಣದ ವೇಳೆ ವೆಜ್ ಥಾಲಿ ಆರ್ಡರ್ ಮಾಡಿದ್ದಾನೆ. ಆದರೆ ಪಾರ್ಸೆಲ್ ತೆರೆದು ನೋಡಿದಾಗ ಪ್ರಯಾಣಿಕನಿಗೆ ಶಾಕ್ ಆಗಿದೆ. ಏಕೆಂದರೆ ಆತ ಆರ್ಡರ್ ಮಾಡಿದ ವೆಜ್ ಥಾಲಿಯಲ್ಲಿ ಥಾಲಿ ಜತೆ ಜಿರಳೆ ಕಂಡು ಬಂದಿದೆ. ಕೂಡಲೇ ಪ್ರಯಾಣಿಕ ಆ ವೆಜ್ ಥಾಲಿಯ ಫೋಟೋ ತೆಗೆದು ಟ್ವಿಟ್ಟರ್ನಲ್ಲಿ, ನಾನು ಆರ್ಡರ್ ಮಾಡಿದ ಊಟದಲ್ಲಿ ಜಿರಳೆ ದೊರೆತಿದೆ. ನನಗೆ ನನ್ನ ಹಣವನ್ನು ಮರುಪಾವತಿಸಿ, ನಿಮ್ಮ ಸವೀಸ್ ತುಂಬಾ ಕೆಟ್ಟದ್ದಾಗಿದೆ ಎಂದು ಕೇಟರಿಂಗ್ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.
ಐಆರ್ಸಿಟಿಸಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ದೂರನ್ನು ದಾಖಲಿಸಲಾಗಿದೆ. ನಿಮ್ಮ ದೂರು ಸಂಖ್ಯೆಯನ್ನು ಎಸ್ಎಂಎಸ್ ಮೂಲಕ ಕಳುಹಿಸಲಾಗಿದೆ ಎಂದು ಉತ್ತರ ನೀಡಿದೆ. ಪ್ರಯಾಣಿಕರಿಗೆ ಗುಣಮಟ್ಟದ ಊಟ ನೀಡುವಲ್ಲಿ ಇಂಡಿಯನ್ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್(IRCTC) ಸಂಪೂರ್ಣ ವಿಫಲವಾಗಿದೆ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.