ನ್ಯೂಸ್ ನಾಟೌಟ್: ಎರಡು ಸರಕು ಸಾಗಣೆ ರೈಲುಗಳು ಮುಖಾಮುಖಿ ಡಿಕ್ಕಿಯಾದ ಘಟನೆ ಪಶ್ಚಿಮ ಬಂಗಾಳದ ಓಂಡಾ ರೈಲು ನಿಲ್ದಾಣದಲ್ಲಿ ನಡೆದಿದೆ. ಅಪಘಾತದಿಂದಾಗಿ 12 ಬೋಗಿಗಳು ಹಳಿ ತಪ್ಪಿವೆ. ಬೋಗಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಲೋಕೋ ಪೈಲೆಟ್ ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಬಂಕುರಾದ ಓಂಡಾ ರೈಲು ನಿಲ್ದಾಣದಲ್ಲಿ ಈ ಅಪಘಾತ ನಡೆದಿದೆ. ಈ ಅಪಘಾತದ ಬಳಿಕ ಕಾರಾಗ್ಪುರ್-ಬಂಕುರಾ-ಆದ್ರಾ ನಡುವಿನ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಸರಕು ಸಾಗಣೆ ಮಾಡುತ್ತಿದ್ದ ರೈಲು ಮುಖ್ಯ ಮಾರ್ಗ ಬದಲು ಲೂಪ್ ಲೈನ್ ಪ್ರವೇಶ ಮಾಡಿತ್ತು. ಆಗ ಹಳಿಯಲ್ಲಿ ನಿಂತಿದ್ದ ಮತ್ತೊಂದು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಮುಖಾಮುಖಿ ಡಿಕ್ಕಿಯ ಪರಿಣಾಮ ಒಟ್ಟು 12 ಬೋಗಿಗಳು ಹಳಿ ತಪ್ಪಿವೆ. ಅವುಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ.
ಗೂಡ್ಸ್ ರೈಲಿನ ಲೋಕೋ ಪೈಲೆಟ್ಗಳು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಅಧಿಕಾರಿಗಳು ಅಪಘಾತ ನಡೆದ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹಳಿಗಳ ಮೇಲೆ ಬಿದ್ದಿರುವ ಬೋಗಿ ತೆರವುಗೊಳಿಸಿದ ಬಳಿಕ ರೈಲುಗಳ ಸಂಚಾರಕ್ಕೆ ಮಾರ್ಗ ಮುಕ್ತವಾಗಲಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.
ಗೂಡ್ಸ್ ರೈಲುಗಳ ಡಿಕ್ಕಿ ಕುರಿತು ಆಗ್ನೇಯ ನೈಋತ್ಯ ರೈಲ್ವೆಯ ಸಿಪಿಆರ್ಒ ಆದಿತ್ಯ ಕುಮಾರ್ ಚೌಧರಿ ಪ್ರತಿಕ್ರಿಯೆ ನೀಡಿದ್ದಾರೆ, “ಒಂದು ಗೂಡ್ಸ್ ರೈಲು ಲೂಪ್ ರೈಲು ಮಾರ್ಗದಲ್ಲಿ ನಿಂತಿತ್ತು. ಮತ್ತೊಂದು ರೈಲು ಸಿಗ್ನಲ್ನಲ್ಲಿ ನಿಲ್ಲಬೇಕಿತ್ತು. ಆದರೆ ಅದು ಸಿಗ್ನಲ್ ಜಂಪ್ ಮಾಡಿದೆ. ಇದರಿಂದಾಗಿ ಹಳಿ ತಪ್ಪಿದೆ. ಈಗ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಕ್ತಾಯಗೊಂಡಿದೆ. 7.30 ರಿಂದ 8.30ರ ತನಕ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. 11 ರೈಲುಗಳನ್ನು ರದ್ದುಗೊಳಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.