ನ್ಯೂಸ್ ನಾಟೌಟ್ : ಒಡಿಶಾದ ಬಾಲಾಸೋರ್ನಲ್ಲಿ ಶುಕ್ರವಾರ(ಜೂನ್ 2) ಸಂಜೆ ಸಂಭವಿಸಿದ ರೈಲು ಅಪಘಾತದಲ್ಲಿ 288ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಇದರ ಮಧ್ಯೆ ಇದು ದುಷ್ಕರ್ಮಿಗಳ ಕೈವಾಡ ಎಂದೂ ಕೆಲವರು ಆರೋಪ ಮಾಡುತ್ತಿದ್ದು, ಅಲ್ಲದೇ ದುರಂತಕ್ಕೆ ಮಸೀದಿ ಕಾರಣ ಎಂದು ತುಮಕೂರಿನ ಶಕುಂತಲಾ ಎಸ್. ಎನ್ನುವ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಇದೀಗ ವೈರಲ್ ಆಗುತ್ತಿದ್ದು, ಇದು ಭಾರೀ ಚರ್ಚೆಗೆ ಕಾರಣವಾಗಿದೆ.
ಈ ದುರಂತಕ್ಕೆ ವಿಶ್ವದ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ. ಭೀಕರ ಸರಣಿ ರೈಲು ಅಪಘಾತಕ್ಕೆ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಪ್ರಕ್ರಿಯೆಯಲ್ಲಾದ ಲೋಪವೇ ಕಾರಣ ಎಂದು ಸ್ವತಃ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೇ ಹೇಳಿದ್ದಾರೆ. ಆದರೆ ಕೋಮು ಸಂಘರ್ಷಕ್ಕೆ ಪ್ರಚೋಧಿಸುವಂತೆ ಪೋಸ್ಟ್ ಹಾಕಿರುವ ತುಮಕೂರಿನ ಮಹಿಳೆ ಯಾರೆಂದು ಒಡಿಶಾ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಒಡಿಶಾ ಬಾಲಸೋರ್ ರೈಲು ದುರಂತಕ್ಕೆ ಜಿಹಾದಿಗಳು ಕಾರಣ ಎಂದು ಘಟನೆ ನಡೆದ ಸಮೀಪವಿರುವ ಮಸೀದಿ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದು, ಇನ್ನು ತುಮಕೂರು ಮೂಲದ ಮಹಿಳೆಯೊಬ್ಬರು ಘಟನೆಗೆ ಮಸೀದಿ ಪಕ್ಕದಲ್ಲಿ ಇರುವುದು ಕಾರಣ ಎಂದು ಬಿಂಬಿಸುವ ಅರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಒಡಿಶಾ ಪೊಲೀಸರ ಗಮನಕ್ಕೆ ಬಂದಿದೆ. ಕೂಡಲೇ ಒಡಿಶಾ ಪೊಲೀಸರು, ಮಸೀದಿ ಫೋಟೋ ಹರಿಬಿಟ್ಟ ಮಹಿಳೆ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಕರ್ನಾಟಕ ಪೊಲೀಸರಿಂದ ಮಹಿಳೆಯ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ವರದಿ ತಿಳಿಸಿದೆ.