ನ್ಯೂಸ್ ನಾಟೌಟ್: ಹಣಕ್ಕಾಗಿ ಜಗತ್ತಿನಲ್ಲಿ ಚಿತ್ರವಿಚಿತ್ರದ ಘಟನೆಗಳು ನಡೆಯುತ್ತಿರುತ್ತದೆ. ಹಣದ ಎದುರು ಸಂಬಂಧಗಳೇ ನಗಣ್ಯ ಎನಿಸಿಬಿಡುತ್ತದೆ. ಇಲ್ಲೊಬ್ಬಳು ಮಹಿಳೆ ಇಂತಹದ್ದೊಂದು ಇಂಥಹ ಹೇಸಿಗೆ ಕೆಲಸ ಮಾಡಿ ಈಗ ಪೊಲೀಸರಿಂದ ತಲೆ ಮರೆಸಿಕೊಂಡಿದ್ದಾಳೆ.
ಕೇಂದ್ರ ಸರ್ಕಾರ ಬಾಲಸೋರ್ ರೈಲು ದುರಂತದಲ್ಲಿ ಮಡಿದ ನತದೃಷ್ಟ ಪ್ರಯಾಣಿಕರ ಕುಟುಂಬಕ್ಕೆ ಪರಿಹಾರ ಧನವನ್ನು ನೀಡುತ್ತಿದೆ. ಇದನ್ನೇ ಲಾಭವಾಗಿಸಲು ಪ್ರಯತ್ನಿಸಿದ ಮಹಿಳೆಯೊಬ್ಬಳು ಪತಿ ರೈಲು ದುರಂತದಲ್ಲಿ ಮೃತಪಟ್ಟಿದ್ದಾನೆ ಎಂದು ಅಪರಿಚಿತ ಮೃತದೇಹವನ್ನು ಗಂಡನ ಮೃತದೇಹ ಎಂದು ಗುರುತಿಸಿದ್ದಳು. ಈ ವಿಚಾರ ತಿಳಿಯುತ್ತಿದ್ದಂತೆ ಇತ್ತ ಜೀವಂತವಿರುವ ಪತಿ ಕಟ್ಟುಕಥೆ ಕಟ್ಟಿದ ಪತ್ನಿಯ ವಿರುದ್ಧ ಬಹನಾಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಅಲ್ಲದೇ ಪರಿಹಾರದ ಹಣ ಪಡೆಯಲು ಈ ರೀತಿ ಸಂಚು ರೂಪಿಸಿದ್ದಾಳೆ ಎಂದು ಆರೋಪಿಸಿದ್ದಾನೆ. ಸಾರ್ವಜನಿಕರ ಹಣವನ್ನು ದೋಚಲು ಯತ್ನಿಸಿದ ಗೀತಾಂಜಲಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪತಿ ಒತ್ತಾಯಿಸಿದ್ದಾನೆ. ಈಗ ಬಂಧನದ ಭೀತಿಯಿಂದ ಮಹಿಳೆ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೀತಾಂಜಲಿ ದತ್ತಾ ಎಂಬಾಕೆ ರೈಲು ಅಪಘಾತದಲ್ಲಿ ತನ್ನ ಪತಿ ಬಿಜಯ್ ದತ್ತಾ ಸಾವನ್ನಪ್ಪಿದ್ದಾನೆ ಎಂದು ಹೇಳಿಕೊಂಡಿದ್ದಳು. ಅಲ್ಲದೆ ಮೃತದೇಹವೊಂದನ್ನು ತನ್ನ ಗಂಡನದ್ದೇ ಎಂದು ಗುರುತಿಸಿದ್ದಳು. ಆದರೆ ದಾಖಲೆಗಳ ಪರಿಶೀಲನೆಯ ನಂತರ ಆಕೆ ಹೇಳುತ್ತಿರುವುದು ಸುಳ್ಳು ಎಂದು ತಿಳಿದುಬಂದಿದೆ. ಬಳಿಕ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಜೂನ್ 2ರ ಸಂಜೆ ಸರಕುಗಳ ರೈಲಿಗೆ ಡಿಕ್ಕಿ ಹೊಡೆದು ಅದರ ಹೆಚ್ಚಿನ ಕೋಚ್ಗಳು ಹಳಿತಪ್ಪಿದ್ದವು. ಈ ಅಪಘಾತದಲ್ಲಿ ಸುಮಾರು 276 ಜನರು ಸಾವನ್ನಪ್ಪಿದ್ದರು. ಅಲ್ಲದೇ 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಒಡಿಶಾ ಸಿಎಂ ನವೀನ್ ಪಟ್ನಾಯಕ್ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು 2 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಸಂತ್ರಸ್ಥರ ಕುಟುಂಬಗಳಿಗೆ ರೈಲ್ವೆ ಸಚಿವಾಲಯ 10 ಲಕ್ಷ ರೂ. ಪರಿಹಾರ ಘೋಷಿಸಿದೆ.