ನ್ಯೂಸ್ ನಾಟೌಟ್ :ವೃದ್ದೆಯರಿಬ್ಬರು ವಾಸವಿರುವ ಮನೆಯಲ್ಲಿ ಚಿನ್ನಾಭರಣ ಕಾಣೆಯಾಗಿರುವ ಘಟನೆ ವರದಿಯಾಗಿದೆ. ಮನೆಯವರು ಮನೆಯೊಳಗೆ ೨ ದಿನಗಳಿಂದ ಎಷ್ಟೇ ಹುಡುಕಾಡಿದರೂ ಸಿಗದ ಹಿನ್ನಲೆಯಲ್ಲಿ ಪತ್ತೆಯಾಗದೇ ವಿಧಿಯಲ್ಲದೆ ಪೊಲೀಸರಿಗೆ ದೂರು ನೀಡಲಾಗಿತ್ತು.ಪೊಲೀಸರು ಮನೆಗೆ ಬರುವಷ್ಟರೊಳಗೆ ಕಳೆದು ಹೋದ ಚಿನ್ನಾಭರಣ ಮತ್ತೆ ಪತ್ತೆಯಾಗಿದೆ.
ಪುತ್ತೂರು ಸಮೀಪವಿರುವ ದರ್ಬೆ ಆಸ್ಪತ್ರೆಯ ಬಳಿ ಮನೆಯೊಂದರಲ್ಲಿ ನಿವೃತ್ತ ವೃದ್ದ ಶಿಕ್ಷಕಿಯರಿಬ್ಬರು ವಾಸ ಮಾಡುತ್ತಿದ್ದರು. ಇವರಿಬ್ಬರನ್ನು ಹೊರತು ಪಡಿಸಿ ಅಲ್ಲಿಗೆ ಪ್ರತಿದಿನ ಕೆಲಸದಾಳು ಬಂದು ತನ್ನ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಳು. ಆದರೆ ಕಳೆದ ಎರಡು ದಿನಗಳ ಹಿಂದೆ ಕಪಾಟಿನಲ್ಲಿಟ್ಟಿದ್ದ ಚಿನ್ನದ ಸರವೊಂದು ಕಾಣೆಯಾಗಿತ್ತು. ಗಾಬರಿಯಾದ ಇಬ್ಬರು ವೃದ್ದೆಯರು ಮತ್ತು ಕೆಲಸದಾಳು ಸೇರಿ ಮನೆಯಲ್ಲೆಲ್ಲಾ ಇಡೀ ದಿನ ಹುಡುಕಾಡಿದರೂ ಚಿನ್ನದ ಸರ ಪತ್ತೆಯಾಗಿರಲಿಲ್ಲ!
ಮಾರನೇ ದಿನವೂ ಇಡೀ ಮನೆಯನ್ನೇ ಗುಡಿಸಿ ಹುಡುಕುವ ಕೊನೆಯ ಪ್ರಯತ್ನ ಮಾಡಲಾಯಿತು.ಆದರೂ ಯಾವುದೇ ಪ್ರಯೋಜನವಾಗಲಿಲ್ಲ.ಕೊನೆಗೆ ವೃದ್ದೆಯರಿಬ್ಬರು ಸಮಾಜ ಸೇವಕರೋರ್ವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಮನೆಗೆ ಬಂದ ಸಮಾಜ ಸೇವಕರು ಹುಡುಕಾಟ ನಡೆಸಿದರೂ ಚಿನ್ನದ ಸರ ಸಿಗಲಿಲ್ಲ.ಕೊನೆಗೆ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಲಾಯಿತು.ಚಿನ್ನದ ಸರ ಹುಡುಕಿ ಹುಡುಕಿ ಸುಸ್ತಾದ ವೃದ್ದೆಯರು ಪೊಲೀಸರ ಬರುವಿಕೆಯನ್ನು ಕಾಯುತ್ತಾ ಕುಳಿತಿದ್ದರು. ಆ ವೇಳೆ ವೃದ್ದೆಯರ ಕೈಯಲ್ಲಿ ಚಿನ್ನದ ಸರವನ್ನಿಟ್ಟ ಕೆಲಸದಾಳು ಬೆಡ್ರೂಂನ ತಲೆದಿಂಬಿನಡಿಯಲ್ಲಿ ಇತ್ತು ಎಂದು ಹೇಳಿದ್ದಾಳೆ. ಸತತ ಎರಡು ದಿನಗಳಿಂದ ನಿರಂತರ ಹುಟುಕಾಟ ನಡೆಸಿ ಸಿಗದ ಚಿನ್ನದ ಸರ ದಿಡೀರ್ ಹೇಗೆ ತಲೆದಿಂಬಿನಡಿಯಲ್ಲಿ ಪ್ರತ್ಯಕ್ಷವಾಯಿತು ಎಂದುದೇ ಹಲವು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿಯೂ ಇದೆ.