ನ್ಯೂಸ್ ನಾಟೌಟ್: ದ.ಕ ಜಿಲ್ಲೆ ಉಸ್ತುವಾರಿ ವಹಿಸಿರೋದು ಹೆಮ್ಮೆಯ ವಿಚಾರ,ಇಲ್ಲಿನ ಜನರ ನಾಡಿಮಿಡಿತ ಸ್ವಲ್ಪವಾದರೂ ನನಗೆ ಗೊತ್ತಿದೆ.ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿದರು.ಯೂತ್ ಕಾಂಗ್ರೆಸ್ ಸಮಯದಿಂದಲೂ ನಾನು ಇಲ್ಲಿಗೆ ಬರ್ತಾ ಇದ್ದೀನಿ.ದ.ಕ ಜಿಲ್ಲೆ ಈ ರಾಜ್ಯದ ಅತ್ಯಂತ ಪ್ರತಿಷ್ಠಿತ ಜಿಲ್ಲೆ.ಇಲ್ಲಿಗೆ ಬಂದು ಕೆಲಸ ಮಾಡೋದು ನನಗೆ ಒಳ್ಳೆಯ ಅವಕಾಶ.ನಾನು ಜಿಲ್ಲೆಗೆ ಅವಾಗಾವಾಗ ಬಂದು ಜನರ ಜೊತೆ ಸಂಪರ್ಕದಲ್ಲಿ ಇರುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದರು.
ಈ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಬೇಕಿತ್ತು, ಆದರೆ ಅದು ಸಾಧ್ಯವಾಗಲಿಲ್ಲ.ಖಾದರ್ ಸಾಹೇಬರಿಗೆ ಸ್ಪೀಕರ್ ಸ್ಥಾನ ಕೊಡಲಾಗಿದೆ.ನನ್ನ ಪ್ರಥಮ ಆದ್ಯತೆ ಅಭಿವೃದ್ಧಿ, ಯೋಜನೆಗಳ ಅನುಷ್ಠಾನ ಆಗಬೇಕು.ಈ ಜಿಲ್ಲೆಯ ಕಾನೂನು ಸುವ್ಯವಸ್ಥೆ ಸರಿಯಾಗಿ ಇರಬೇಕು.ಅಭಿವೃದ್ಧಿಗೆ ಪೂರಕವಾಗಿ ಶಾಂತಿ, ನೆಮ್ಮದಿ, ಸಾಮರಸ್ಯ ಬೇಕು.ಜನ ಬರಬೇಕು, ಇಲ್ಲಿ ಬಂಡವಾಳ ಹೂಡಬೇಕು ಎಂದು ನುಡಿದರು.
ಇಲ್ಲಿ ಅನೇಕ ಸಂಧರ್ಭದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.ಪೊಲೀಸರು ಪಕ್ಷಪಾತ ಮಾಡದೇ ಕಾನೂನು ಉಲ್ಲಂಘಿಸಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು.ಪ್ರಚೋದನೆ, ಬೆಂಕಿ ಹಚ್ಚೋ ಕೆಲಸ ಸುಲಭ, ಅದನ್ನ ಆರಿಸೋದು ಕಷ್ಟ.ಹೀಗಾಗಿ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಸರಿಯಾಗಿ ಕೆಲಸ ಮಾಡಬೇಕು.ನಾನು ಯಾವುದೇ ಪಕ್ಷ, ಸಂಘಟನೆ ಅಂತ ಹೇಳಲ್ಲ, ಎಲ್ಲರೂ ಸರಿಯಿರಬೇಕು.ಯಾವುದೇ ಜಾತಿ ಧರ್ಮದ ತಾರತಮ್ಯ ಇಲ್ಲದೇ ಜನರು ಬದುಕಬೇಕು.ಮಳೆಗಾಲಕ್ಕೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಳ್ಳಬೇಕು.ಇವತ್ತು ಸಭೆ ಕರೆದಿದ್ದೇನೆ, ಮುಂದಿನ ವಾರ ಮತ್ತೆ ಸಭೆ ಮಾಡುತ್ತೇನೆ.ಪ್ರಕೃತಿ ವಿಕೋಪಗಳ ಸಮಸ್ಯೆ ಬಗ್ಗೆ ಮಾಹಿತಿ ಪಡೀತಿನಿ.ನಮ್ಮ ಯೋಜನೆಗಳ ಜಾರಿ ಬಗ್ಗೆಯೂ ನಾನು ಸಭೆ ಮಾಡುತ್ತೇನೆ ಎಂದು ದಿನೇಶ್ ಗುಂಡೂರಾವ್ ಅವರು ವಿವರಿಸಿದರು.