ನ್ಯೂಸ್ ನಾಟೌಟ್ : ಒಲಿಂಪಿಕ್ಸ್ ಪದಕ ವಿಜೇತೆ ಹಾಗೂ ಅಮೆರಿಕದ ವೇಗದ ಓಟಗಾರ್ತಿ ಟೊರಿ ಬೌವಿ (32) ಹೆರಿಗೆ ಸಮಯದಲ್ಲಿ ಮೃತರಾಗಿದ್ದಾರೆ.
ಎಂಟು ತಿಂಗಳ ಗರ್ಭಿಣಿಯಾಗಿದ್ದ ಅವರು ಫ್ಲೋರಿಡಾದ ಆರೇಂಜ್ ಕೌಂಟಿಯ ಮನೆಯಲ್ಲಿ ಒಬ್ಬರೇ ಇದ್ದರು. ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಕುಸಿದು ಬಿದ್ದಿದ್ದರು. ಆ ಸಮಯದಲ್ಲಿ ಅವರು ಉಸಿರಾಟದ ತೊಂದರೆ (ಎಕ್ಲಾಂಪ್ಸಿಯಾ- ಹೆರಿಗೆ ವೇಳೆ ಕೋಮಾಕ್ಕೆ ಜಾರುವುದು) ಅನುಭವಿಸಿರಬಹುದು. ಇದರಿಂದ ಅಧಿಕ ರಕ್ತದೊತ್ತಡ ಉಂಟಾಗಿ ಪ್ರಾಣ ಬಿಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆಶ್ಚರ್ಯವೆಂದರೆ ಟೊರಿ ಮೃತಪಟ್ಟ ವೇಳೆ ಮಗು ಗರ್ಭದಿಂದ ಹೊರಬರುವ ಪ್ರಕ್ರಿಯೆಯಲ್ಲಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಟೊರಿ ಅವರು 2016ರ ರಿಯೊ ಒಲಿಂಪಿಕ್ನಲ್ಲಿ 4X100 ಮೀಟರ್ ರಿಲೇ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು. ಇದೇ ವೇಳೆ ಅವರು 100 ಮೀಟರ್ ಓಟದಲ್ಲಿ ಬೆಳ್ಳಿ, 200 ಮೀಟರ್ ಓಟದಲ್ಲಿ ಕಂಚು ಗೆದ್ದಿದ್ದರು. ಟೊರಿ ನಿಧನಕ್ಕೆ ಅವರ ಕುಟುಂಬದರವು, ಅಮೆರಿಕದ ಖ್ಯಾತ ಓಟಗಾರ ಜಸ್ಟಿನ್ ಗ್ಯಾಟ್ಲಿನ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಟೊರಿ ಒಬ್ಬ ಎದುರಾಳಿಗಳಿಗೆ ಉಗ್ರ ಪ್ರತಿಸ್ಪರ್ಧಿಯಾಗಿರುತ್ತಿದ್ದ ಕ್ರೀಡಾಪಟು ಎಂದು ಗ್ಯಾಟ್ಲಿನ್ ಹೇಳಿದ್ದಾರೆ.