ನ್ಯೂಸ್ ನಾಟೌಟ್ : ಕೇರಳದ ಕೆಲ ಯೂಟ್ಯೂಬರ್ಸ್ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಇದೀಗ ತೆರಿಗೆ ವಂಚನೆ ಆರೋಪದ ಅಡಿಯಲ್ಲಿ ಕೆಲ ಯೂಟ್ಯೂಬರ್ಸ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಐಟಿ ಇಲಾಖೆ ಮುಂದಾಗಿದೆ.ಸುಮಾರು 25 ಕೋಟಿ ರೂಪಾಯಿ ತೆರಿಗೆಯನ್ನು ಯೂಟ್ಯೂಬರ್ಸ್ ವಂಚಿಸಿರುವುದು ಐಟಿ ದಾಳಿ ವೇಳೆ ತಿಳಿದುಬಂದಿದೆ.
ಈ ಬಗ್ಗೆ ವಿಚಾರಿಸಿದಾಗ ಹಲವು ಯೂಟ್ಯೂಬರ್ಸ್ ನಮಗೆ ತೆರಿಗೆ ಕಟ್ಟಬೇಕು ಎಂಬುದು ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.ಇದರಲ್ಲಿ ಕೆಲ ಯೂಟ್ಯೂಬರ್ಸ್ 2 ಕೋಟಿ ರೂಪಾಯಿವರೆಗೂ ತೆರಿಗೆ ಕಟ್ಟಬೇಕಿದೆ ಎಂದು ತಿಳಿದು ಬಂದಿದೆ. ಆದಾಗ್ಯೂ ಕೆಲವರು ಈವರೆಗೂ ಒಂದೇ ಒಂದು ರೂಪಾಯಿ ತೆರಿಗೆ ಕಟ್ಟಿಲ್ಲ ಎಂದು ಐಟಿ ಇಲಾಖೆ ತಿಳಿಸಿದೆ.ಹೀಗಾಗಿ ಸುಮಾರು 25 ಕೋಟಿ ರೂಪಾಯಿ ತೆರಿಗೆಯನ್ನು ಯೂಟ್ಯೂಬರ್ಸ್ ವಂಚಿಸಿರುವುದಾಗಿ ಹೇಳಲಾಗಿದೆ.
ಸದ್ಯ ಐಟಿ ಅಧಿಕಾರಿಗಳು ರಾಜ್ಯದ 13 ಯೂಟ್ಯೂಬರ್ಸ್ ಮನೆ ಮತ್ತು ಕಚೇರಿಗಳನ್ನು ಮಾತ್ರ ಪರಿಶೀಲಿಸಿದ್ದಾರೆ.ಐಟಿ ಇಲಾಖೆಯು ತನ್ನ ತೆರಿಗೆ ತಪಾಸಣೆಯನ್ನು ರಾಜ್ಯದ ಹೆಚ್ಚಿನ ಯೂಟ್ಯೂಬರ್ಸ್ಗೆ ವಿಸ್ತರಿಸುವ ಸುಳಿವು ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಯೂಟ್ಯೂಬರ್ಸ್ ಮನೆಗಳ ಮೇಲೆ ದಾಳಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೆಲ ಯೂಟ್ಯೂಬರ್ಸ್ ಆದಾಯ ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಇವರಲ್ಲಿ ಹಲವರ ವಾರ್ಷಿಕ ಆದಾಯ 1ರಿಂದ 2 ಕೋಟಿ ರೂಪಾಯಿಗಳು ಎಂದು ಹೇಳಲಾಗಿದೆ. ಉದ್ಘಾಟನೆ, ವಿದೇಶಿ ಪ್ರವಾಸ ಇತ್ಯಾದಿಗಳಲ್ಲಿ ಪಾಲ್ಗೊಳ್ಳುವುದರಿಂದ ಸಾಕಷ್ಟು ಆದಾಯ ಬರುತ್ತಿದೆ ಎಂದು ಪರಿಶೀಲನೆ ವೇಳೆ ತಿಳಿದುಬಂದಿದೆ.