ನ್ಯೂಸ್ ನಾಟೌಟ್: ಭಾರತವು ಇತರ ದೊಡ್ಡ ದೇಶಗಳಿಗಿಂತ ಭವಿಷ್ಯದ ಮಟ್ಟಿಗೆ ನೋಡಿದರೆ ಹೆಚ್ಚಿನ ಭರವಸೆಯನ್ನು ಹೊಂದಿದೆ. ಭಾರತದ ಭವಿಷ್ಯದ ಬಗ್ಗೆ ನೋಡಲು ಹಾಗೂ ತಿಳಿದುಕೊಳ್ಳಲು ತೀವ್ರ ಉತ್ಸುಕನಾಗಿದ್ದೇನೆ ಎಂದು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಬಳಿಕ ಹೇಳಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನ ಮಂತ್ರಿ ನ್ಯೂಯಾರ್ಕ್ ನಲ್ಲಿ ಎಲೋನ್ ಮಸ್ಕ್ ಸೇರಿದಂತೆ ವಿವಿಧ ಉದ್ಯಮಿಗಳನ್ನು ಭೇಟಿ ಮಾಡಿದ್ದು ಮತ್ತು ಅವರಾಡಿರುವ ಮಾತುಗಳು ಭಾರೀ ವೈರಲ್ ಆಗುತ್ತಿವೆ.
ಮಂಗಳವಾರ ನ್ಯೂಯಾರ್ಕ್ ನಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾದ ನಂತರ ಟ್ವಿಟ್ಟರ್ ಕಂಪನಿಯ ಮಾಜಿ ಮಾಲೀಕ ಮತ್ತು ಸಿಇಒ ಜಾಕ್ ಡಾರ್ಸೆ ಅವರ ಇತ್ತೀಚಿನ ಭಾರತ ಸರ್ಕಾರದ ವಿರುದ್ಧದ ಆರೋಪದ ಬಗ್ಗೆ ಕೇಳಿದಾಗ, ತಮ್ಮ ಸಾಮಾಜಿಕ ಮಾಧ್ಯಮ ಸಂಸ್ಥೆ ಟ್ವಿಟರ್ಗೆ ಸ್ಥಳೀಯ ಸರ್ಕಾರವನ್ನು ಅನುಸರಿಸುವುದನ್ನು ಬಿಟ್ಟು ಬೇರೆ ಆಯ್ಕೆ ಇಲ್ಲ ಅಥವಾ ಅದನ್ನು ಮುಚ್ಚಬೇಕಾಗುತ್ತದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ನಾವು ಯಾವುದೇ ದೇಶದಲ್ಲಿರಲಿ ಅಲ್ಲಿನ ಕಾನೂನು, ರೀತಿ ನೀತಿಗಳನ್ನು ಅನುಸರಿಸುವುದು ನಾವು ಮಾಡಬಹುದಾದ ಅತ್ಯುತ್ತಮ ಕೆಲಸವಾಗಿದೆ. ಅದಕ್ಕಿಂತ ಹೆಚ್ಚು ನಮಗೆ ಮಾಡಲು ಸಾಧ್ಯವಿಲ್ಲ. ವಿವಿಧ ರೀತಿಯ ಸರ್ಕಾರಗಳಿಗೆ ವಿಭಿನ್ನ ನಿಯಮಗಳು ಮತ್ತು ನಿಬಂಧನೆಗಳು ಇರುತ್ತವೆ. ಕಾನೂನಿನಡಿಯಲ್ಲಿ ಮುಕ್ತವಾಗಿ ವ್ಯವಹರಿಸಲು ನಮ್ಮ ಕೈಲಾದ ಪ್ರಯತ್ನ ಮಾಡುತ್ತೇವೆ ಎಂದರು.
ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆಯೇ ಎಂಬ ಪ್ರಶ್ನೆಗೆ, ಮುಂದಿನ ವರ್ಷ ಭಾರತ ದೇಶಕ್ಕೆ ಭೇಟಿ ನೀಡಲು ಯೋಜಿಸುತ್ತಿರುವುದಾಗಿ ಮಸ್ಕ್ ಹೇಳಿದರು. ಸದ್ಯದಲ್ಲಿಯೇ ಭಾರತದಲ್ಲಿನ ಯೋಜನೆ ಬಗ್ಗೆ ಘೋಷಿಸುತ್ತೇವೆ, ಅದಕ್ಕೆ ಅಲ್ಲಿನ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.