ನ್ಯೂಸ್ ನಾಟೌಟ್ : ಕರಾಯದ ಮಹಿಳೆಯೊಬ್ಬರು ಹೆರಿಗೆ ವೇಳೆ ತೀವ್ರ ರಕ್ತಸಾವ್ರದಿಂದ ಮೃತಪಟ್ಟ ಬೆನ್ನಲ್ಲೇ ಇದೀಗ ಹಸುಗೂಸು ಕೂಡ ಮೃತಪಟ್ಟ ಘಟನೆ ಮಂಗಳೂರು ಜಿಲ್ಲಾ ಆಸ್ಪತ್ರೆ ವೆನ್ಲಾಕ್ನಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಮುರ ಕಾಲೋನಿ ನಿವಾಸಿ, ಬಾಲಕೃಷ್ಣ ಗೌಡ ಎಂಬವರ ಪತ್ನಿ, ಹಿರೇಬಂಡಾಡಿ ಗ್ರಾಮದ ಆಶಾ ಕಾರ್ಯಕರ್ತೆ ಭವ್ಯ (28) ಜೂ. 20ರಂದು ರಾತ್ರಿ ಹೆರಿಗೆ ಸಂದರ್ಭ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದರು.ಇದೀಗ ಅವರ ಹಸುಗೂಸು ಗುರುವಾರ ಮುಂಜಾನೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.ಭವ್ಯರವರು ತನ್ನ 3ನೇ ಹೆರಿಗೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಮಂಗಳವಾರ ರಾತ್ರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಹೆರಿಗೆಯಾಗುತ್ತಲೇ ರಕ್ತಸ್ರಾವ ಉಂಟಾಗಿದ್ದು, ಕೂಡಲೇ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆತರಲಾಯಿತು.ಆದರೆ ಅವರು ದಾರಿ ಮಧ್ಯದಲ್ಲಿಯೇ ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಜನಿಸಿದ ಮಗುವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮುಂಜಾನೆ ಮಗುವೂ ಮೃತಪಟ್ಟಿದೆ ಎನ್ನಲಾಗಿದೆ.
ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ಆಕೆಯ ಗಂಡ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.ಜೂ.20ರಂದು ಮಂಗಳವಾರ ಸಂಜೆ 6:30ರ ಸುಮಾರಿಗೆ ತನ್ನ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡು ನೋವಿನಿಂದ ಒದ್ದಾಡುತ್ತಿದ್ದರೂ ಆಕೆಯ ದೈಹಿಕ ಆರೋಗ್ಯ ಸ್ಥಿತಿಯ ಬಗ್ಗೆಯಾಗಲಿ, ಸಹಜ ಹೆರಿಗೆಯ ಸಾಧ್ಯತೆ ಬಗ್ಗೆಯಾಗಲಿ ಯಾವುದೇ ಪರೀಕ್ಷೆಗಳನ್ನು ನಡೆಸದೆ ನೋವಿನಲ್ಲೇ ನರಳುವಂತೆ ಮಾಡಿದ್ದರು. ಆಕೆ ಅತೀವ ನೋವಿನೊಂದಿಗೆ ಒದ್ದಾಡುತ್ತಿದ್ದರೂ ವೈದ್ಯರನ್ನು ಕರೆಸುವ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಯಾವುದೇ ಪ್ರಯತ್ನ ನಡೆಸಲಿಲ್ಲ. ತಜ್ಞ ವೈದ್ಯರನ್ನು ಕರೆಸುವ ಅಥವಾ ಅವರ ಸಲಹೆ ಕೇಳುವ ಯಾವುದೇ ಪುಯತ್ನವನ್ನು ಮಾಡದೆ ಗರ್ಭಿಣಿಯ ದೈಹಿಕ ಧಾರಣಾ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳದೆ ಒತ್ತಡ ತಂತ್ರವನ್ನು ಅನುಸರಿಸಿ ಅವಳ ಹೆರಿಗೆ ಮಾಡಲಾಗಿದೆ.ಪರಿಣತ ವೈದ್ಯರ ಅನುಪಸ್ಥಿತಿಯಲ್ಲಿ ಗರ್ಭಿಣಿಯ ಹೊಟ್ಟೆಗೆ ಅವೈಜ್ಞಾನಿಕ ಒತ್ತಡವನ್ನು ಹಾಕಿ ರಾತ್ರಿ ಸುಮಾರು 8:30 ರ ಸುಮಾರಿಗೆ ಬಲವಂತಿಕೆಯ ಹೆರಿಗೆಯಾಗುವಂತೆ ಮಾಡಿರುವುದರಿಂದ ತನ್ನ ಪತ್ನಿ ಹಾಗೂ ಹಸುಕೂಸು ಸಾವನ್ನಪ್ಪಲು ಆಸ್ಪತ್ರೆಯ ಸಿಬ್ಬಂದಿ ಕಾರಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ನೀಡಿದ ಲಿಖಿತ ದೂರು ದೂರಿನಲ್ಲಿ ಆಪಾದಿಸಿದ್ದಾರೆ. ದೂರು ಸ್ವೀಕರಿಸಿರುವ ಜಿಲ್ಲಾಧಿಕಾರಿಯವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ. ಭವ್ಯ ಅವರು ಕೊಕ್ಕಡದ ಕೃಷ್ಣಪ್ಪ ಎಂಬವರ ಮಗಳಾಗಿದ್ದು, ಇವರಿಗೆ ಇಬ್ಬರು ಪುತ್ರರಿದ್ದಾರೆ. (4ನೇ ತರಗತಿ ಕಲಿಯುತ್ತಿರುವ ಪುತ್ರ ಭವಿಷ್, 3ನೇ ತರಗತಿಯ ಸ್ವಸ್ತಿಕ್ )