ನ್ಯೂಸ್ ನಾಟೌಟ್: ಮಸೀದಿಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಅರಸೀಕೆರೆ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೊಹಮ್ಮದ್ ಸುಹೇಬ್ (35) ಎಂದು ಗುರುತಿಸಲಾಗಿದೆ.
ಬಂಧಿತನಿಂದ 7 ಆಂಪ್ಲಿಪ್ಲೇಯರ್, 6 ಸಿಸಿ ಕ್ಯಾಮರಾಗಳು, 1 ಕಂಪ್ಯೂಟರ್, 1 ಟಿವಿ, 1 ಸೌಂಡ್ ಮಿಕ್ಸರ್, 2 ಸ್ಪೀಕರ್, 2 ಮಾನಿಟರ್, 1 ಡಿವಿಆರ್, ಬೀಗ ಹೊಡೆಯಲು ಬಳಸುತ್ತಿದ್ದ ಕಬ್ಬಿಣದ ರಾಡ್, ಹೋಂ ಥಿಯೇಟರ್ನ 2 ಸ್ಪೀಕರ್ , ಸಿಸಿ ಕ್ಯಾಮರಾ ಸ್ವಿಚ್, ಒಂದು ಮಾನಿಟರ್, ಕ್ಯಾನೆನ್ ಕ್ಯಾಮರಾ ಸೇರಿದಂತೆ ಒಟ್ಟು 5,35,000 ರೂ. ಬೆಲೆಯ ವಸ್ತುಗಳನ್ನು ಪೊಲೀಸರು ಆತನಿಂದ ವಶಕ್ಕೆ ಪಡೆದಿದ್ದಾರೆ.
ಆರೋಪಿ ಮೊಹಮ್ಮದ್ ಸುಹೇಬ್ ಮೈಸೂರಿನ ಇಲವಾಲದ ರಬ್ಬಾನಿ ಮಸೀದಿ, ಬಿಳಿಕೆರೆಯ ಈದ್ಗಾ ಮಸೀದಿ, ಪಿರಿಯಾಪಟ್ಟಣದ ಪಿರ್ದೋಸ್ ಮಸೀದಿ, ಹಳೆ ಹುಣಸೂರಿನ ಗೌಸಿಯಾ ಮಸೀದಿ, ಕೆ.ಆರ್.ನಗರದ ಜಾಮೀಯಾ ಮಸೀದಿ, ಹಾಸನದ ಕುಬಾ ಮಸೀದಿ ಮತ್ತು ಗುಜರಾತಿ ದರ್ಗಾ, ಗಂಡಸಿಯ ಮದಿನಾ ಮಸೀದಿ, ಅರಸೀಕೆರೆ ನಗರದ ಜಾಮೀಯಾ ಮಸೀದಿ ಮತ್ತು ಖಾದರ್ ಚಾವಲಿ ದರ್ಗಾಗಳಲ್ಲಿ ಕಳ್ಳತನ ಮಾಡಿದ್ದ ಎನ್ನುವುದು ಪೊಲೀಸ್ ಕಾರ್ಯಾಚರಣೆಯಲ್ಲಿ ತಿಳಿದು ಬಂದಿದೆ.
ಈ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ. ಕಳ್ಳತನ ಪ್ರಕರಣದಲ್ಲಿ ಆರೋಪಿ ಮೊಹಮ್ಮದ್ ಸುಹೇಬ್ನನ್ನು ಬಂಧಿಸಲಾಗಿದೆ. ಆರೋಪಿ ಹತ್ತು ಮಸೀದಿ ಹಾಗೂ ದರ್ಗಾಗಳಲ್ಲಿ ಕಳ್ಳತನ ಮಾಡಿರುವ ಮಾಹಿತಿ ಇದೆ ಎಂದಿದ್ದಾರೆ.
ಮದುವೆಯಾದ ನಂತರ ಈತನನ್ನು ಜಮಾತ್ನಿಂದ ಉಚ್ಛಾಟನೆ ಮಾಡಲಾಗಿತ್ತು. ಇದರಿಂದ ಕೋಪಗೊಂಡಿದ್ದ ಮೊಹಮ್ಮದ್ ಸುಹೇಬ್ ದರ್ಗಾ, ಮಸೀದಿಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಿದ್ದಾನೆ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.