ನ್ಯೂಸ್ ನಾಟೌಟ್: ಕಲ್ಯಾಣ ಮಂಟಪದ ಕಡೆ ಹೊರಟಿದ್ದ ತಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಮದುವೆ ಮನೆಯಲ್ಲಿ ಸೂತಕದ ಛಾಯೆ ಅವರಿಸಿರುವ ಘಟನೆ ಶಿವಮೊಗ್ಗದ ಸಾಗರ ತಾಲೂಕಿನ ಚೆನ್ನಕೊಪ್ಪ ಗ್ರಾಮದಲ್ಲಿ ಇಂದು (ಜೂನ್ 28)ನಡೆದಿದೆ.
ಶಿರಸಿಯ ಬನವಾಸಿಯ ಮಂಜುನಾಥ ಗೌಡ (64) ಎಂಬುವರ ಇಬ್ಬರ ಹೆಣ್ಣು ಮಕ್ಕಳ ಮದುವೆ ಇಂದು ಸಾಗರ ತಾಲೂಕು ಚೆನ್ನಕೊಪ್ಪದಲ್ಲಿ ನಡೆಯಬೇಕಿತ್ತು. ಅದೇ ಗ್ರಾಮದ ಸಣ್ಣ ಕಲ್ಯಾಣ ಮಂದಿರದಲ್ಲಿ ಮದುವೆ ಏರ್ಪಡಿಸಲಾಗಿತ್ತು. ಮದುವೆಗೆ ಹೊರಟ ಮಂಜುನಾಥ ಗೌಡ, ರಸ್ತೆ ದಾಟುವಾಗ ಸಾಗರ ಕಡೆಯಿಂದ ಶಿವಮೊಗ್ಗ ಮಾರ್ಗವಾಗಿ ಬರುತ್ತಿದ್ದ ಶಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮಂಜುನಾಥ ಗೌಡರ ಪತ್ನಿ ಸಹ ಕಳೆದ ಮೂರು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದರಿಂದಾಗಿ, ಅವರ ಮಾವನ ಮನೆಯಲ್ಲಿ ಇಬ್ಬರು ಹೆಣ್ಣುಮಕ್ಕಳನ್ನು ಇಟ್ಟುಕೊಂಡು ಓದಿಸುತ್ತಿದ್ದರು. ಇಬ್ಬರು ಹೆಣ್ಣುಮಕ್ಕಳ ಮದುವೆಯನ್ನು ಇಂದು ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ದುರ್ದೈವ ತಂದೆಯೇ ನಿಧನರಾಗಿದ್ದಾರೆ. ಇದರಿಂದ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಹೆಣ್ಣು ಮಕ್ಕಳಿಗೆ ಬರಸಿಡಿಲು ಬಡಿದಂತೆ ಆಗಿದೆ. ಒಂದು ಕಡೆ ತಾಯಿ ಇಲ್ಲ, ಈಗ ತಮ್ಮ ಮದುವೆ ನೋಡಬೇಕಾಗಿದ್ದ ತಂದೆ ಸಹ ಸಾವನ್ನಪ್ಪಿರುವುದು ನಿಜಕ್ಕೂ ದುರಂತವೇ ಸರಿ.
ಅಪಘಾತದ ಕುರಿತು ಆನಂದಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗರದಲ್ಲಿ ಮೃತರ ಶವ ಪರೀಕ್ಷೆ ನಡೆಸಲಾಗಿದೆ. ಅಪಘಾತ ಎಸಗಿ ಪರಾರಿಯಾಗಿರುವ ಕಾರಿನ ಪತ್ತೆಗೆ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ.