ನ್ಯೂಸ್ ನಾಟೌಟ್: ಕೇರಳ ಮೂಲದ ಉದ್ಯಮಿಯೊಬ್ಬರನ್ನು ಯುವತಿಯ ಮೂಲಕ (Honey Trap) ಹನಿಟ್ರ್ಯಾಪ್ಗೆ ಬೀಳಿಸಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಎಂದು ಹೇಳಿ 10 ಲಕ್ಷ ರೂಪಾಯಿ ದರೋಡೆ ಮಾಡಿದ ಘಟನೆ ಮಂಗಳೂರಿನಲ್ಲಿ ಇಂದು ಬೆಳಕಿಗೆ ಬಂದಿದೆ.
ಮಂಗಳೂರಿನ ವಾಮಂಜೂರು ಬಳಿಯ ಮೂಡುಶೆಡ್ಡೆಯಲ್ಲಿರುವ ರೆಸಾರ್ಟ್ ಒಂದರಲ್ಲಿ ಕೇರಳದ ಮೂಲದ ಮುಸ್ಲಿಂ ಸಮುದಾಯದ ಉದ್ಯಮಿಯನ್ನು ಕಳೆದ ಫೆಬ್ರವರಿ 16 ರಂದು ಹನಿಟ್ರ್ಯಾಪ್ಗೆ ಬೀಳಿಸಲಾಗಿತ್ತು.
ಮೂಡಬಿದಿರೆ ಮೂಲದ ಯುವತಿ ಉದ್ಯಮಿ ಜೊತೆ ರೆಸಾರ್ಟ್ನಲ್ಲಿ ಇರುವಾಗ ಅಲ್ಲಿಗೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಎಂದು ಹೇಳಿಕೊಂಡ ಆರೋಪಿಗಳು ಫೋಟೋ, ವಿಡಿಯೋ ಮಾಡಿ ಉದ್ಯಮಿಗೆ ಹಲ್ಲೆಗೈದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೇ ಕೇಳಿದಷ್ಟು ಹಣ ಕೊಟ್ಟಿಲ್ಲವೆಂದರೆ ವಿಡಿಯೋ ವೈರಲ್ ಮಾಡುತ್ತೇವೆ ಎಂದು ಹೆದರಿಸಿದ ಗ್ಯಾಂಗ್ ಉದ್ಯಮಿಯ ಕೈಯಲ್ಲಿದ್ದ ಸಾವಿರಾರು ಹಣವನ್ನು ದೋಚಿ ಪರಾರಿಯಾಗಿದೆ.
ಬಳಿಕ ಕೆಲ ದಿನಗಳ ನಂತರ ಅದೇ ಉದ್ಯಮಿಗೆ ಕರೆಮಾಡಿ ಪುನಃ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ಮೂರು ತಿಂಗಳಲ್ಲಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಹಣವನ್ನು ದೋಚಿದ್ದಾರೆ. ಇದರಿಂದ ನೊಂದ ಉದ್ಯಮಿ ತಾನು ಹನಿಟ್ರ್ಯಾಪ್ಗೆ ಒಳಗಾದ ಬಗ್ಗೆ ಕಾವೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.
ನಂತರ ಕಮಿಷನರ್ ಸೂಚನೆ ಮೇರೆಗೆ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದಾಗ ಯುವತಿ ಜೊತೆ ಆರೋಪಿಗಳಿಗೆ ನಂಟು ಇರುವುದು ಕಂಡು ಬಂದಿತ್ತು. ಬಳಿಕ ಯುವತಿ ಸೇರಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಬೊಂದೇಲ್ ನಿವಾಸಿ ಪ್ರೀತಮ್, ಮೂಡುಶೆಡ್ಡೆ ಪರಿಸರ ನಿವಾಸಿಗಳಾದ ಮುರುಳಿ, ಕಿಶೋರ್, ಸುಶಾಂತ್, ಅಭಿ, ಮೂಡುಬಿದಿರೆಯ ಯುವತಿ ಸೇರಿ ಒಟ್ಟು 8 ಮಂದಿಯನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.