ನ್ಯೂಸ್ ನಾಟೌಟ್: ಮಂಗಳೂರಿನಲ್ಲಿ ಕಳೆದ ನವೆಂಬರ್ನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟಕ್ಕೆ ಪಾಕಿಸ್ಥಾನದ ಐಎಸ್ಐ ಲಿಂಕ್ ಇರುವ ಅನುಮಾನ ವ್ಯಕ್ತವಾಗಿದೆ. ಕುಕ್ಕರ್ ಬಾಂಬ್ ಸ್ಫೋಟದ ಉಗ್ರ ಶಿವಮೊಗ್ಗದ ಶಾರೀಕ್ ಐಎಸ್ಐ ಏಜೆಂಟ್ಗಳ ಜತೆ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ.
ಉಗ್ರ ಶಾರೀಕ್ಗೆ ಸಿಮ್ ಕಾರ್ಡ್ ಮತ್ತು ಮೊಬೈಲ್ ಫೋನ್ ಪೂರೈಸಿದ್ದ ವ್ಯಕ್ತಿಯೊಬ್ಬ ನಿನ್ನೆ ಒಡಿಸಾದ ಭುವನೇಶ್ವರದಲ್ಲಿ ಸೆರೆಯಾಗಿದ್ದಾನೆ. ಪ್ರೀತಮ್ಕಾರ್ (31) ಎಂಬ ಹೆಸರಿಟ್ಟುಕೊಂಡಿರುವ ಈತ ಐಎಸ್ಐ ಜತೆಗೆ ನಂಟು ಹೊಂದಿರುವುದು ತನಿಖೆಯಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಉಗ್ರ ಶಾರಿಕ್ ಐಎಸ್ಐ ಸಂಪರ್ಕದಲ್ಲಿದ್ದ ಅನುಮಾನ ವ್ಯಕ್ತವಾಗಿದೆ.
ಒಡಿಶಾದ ಸ್ಟೆಷಲ್ ಟಾಸ್ಕ್ ಫೋರ್ಸ್ ಪ್ರೀತಂಕಾರ್ನನ್ನು ಬಂಧಿಸಿದೆ. ಪಾಕಿಸ್ಥಾನದ ಐಎಸ್ಐ ಏಜೆಂಟ್ ಒಬ್ಬನಿಗೆ ಸಿಮ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪೂರೈಸಿದ್ದನ್ನು ಪ್ರೀತಂ ಕಾರ್ ಒಪ್ಪಿಕೊಂಡಿದ್ದಾನೆ. ಆ ಬಳಿಕ ಅದೇ ಸಿಮ್ ಕಾರ್ಡನ್ನು ಉಗ್ರ ಶಾರೀಕ್ಗೆ ನೀಡಿದ್ದ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ ಒಡಿಶಾ ಎಸ್ಟಿಎಫ್ ಮಾಹಿತಿ ನೀಡಿದೆ.
ಪ್ರೀತಮ್ಕಾರ್ ದೇಶವಿರೋಧಿ ಕೃತ್ಯ, ಸೈಬರ್ ವಂಚನೆ ಇತ್ಯಾದಿ ಕೃತ್ಯಗಳನ್ನು ಎಸಗುತ್ತಿದ್ದ. ಸಿಮ್ ಕಾರ್ಡ್ ಖರೀದಿಸಿ ಒಟಿಪಿ ಮಾರಾಟ ಮಾಡುವುದು ಅವನ ಮುಖ್ಯ ದಂಧೆಯಾಗಿತ್ತು. ಬ್ಯಾಂಕ್ ಅಕೌಂಟ್ ಹ್ಯಾಕ್, ನಕಲಿ ಸಿಮ್ ಕಾರ್ಡ್ ಮಾರಾಟ ಇತ್ಯಾದಿ ಕೃತ್ಯಗಳನ್ನು ಎಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕಿಸ್ಥಾನದ ಗುಪ್ತಚರ ಸಂಸ್ಥೆಯೊಂದಿಗೆ ನೇರ ಸಂಪರ್ಕದಲ್ಲಿದ್ದ ಪ್ರೀತಮ್ ಕರ್ (31) ಎಂಬಾತನನ್ನು ಜೈಪುರ ಜಿಲ್ಲೆಯ ಭುರುಂಗ ಹಳ್ಳಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ ಮುಖ್ಯ ಆರೋಪಿ ಶಿವಮೊಗ್ಗದ ಶಾರಿಕ್ಗೆ ಸಿಮ್ ಕಾರ್ಡ್, ಮೊಬೈಲ್ ನೀಡಿದ ಆರೋಪ ಪ್ರೀತಮ್ಕರ್ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸೆರೆಯಾಗಿರುವ 5ನೇ ಆರೋಪಿ ಈತ. ಕನಿಷ್ಠ ಪಕ್ಷ ಎರಡು ಬಾರಿ ಐಎಸ್ಐ ಏಜೆಂಟ್ಗಳನ್ನು ನೇರವಾಗಿ ಭೇಟಿ ಮಾಡಿ ಇತ್ತೀಚೆಗೆ 1.5 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದಾನೆ ಎಂದು ಒಡಿಶಾದ ವಿಶೇಷ ಕಾರ್ಯಪಡೆ ತಿಳಿಸಿದೆ. ಆದರೆ ಶಿವಮೊಗ್ಗದ ಶಾರಿಕ್ ಹೇಗೆ ಒಡಿಶಾದಲ್ಲಿದ್ದ ಪ್ರೀತಮ್ನನ್ನು ಸಂಪರ್ಕಿಸಿದ್ದಾನೆ ಎನ್ನುವ ಕುರಿತು ತನಿಖೆ ನಡೆಯುತ್ತಿದೆ.