ನ್ಯೂಸ್ ನಾಟೌಟ್: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಹಿಂದೂ ವಿರೋಧಿ ನಡೆಯನ್ನು ಅನುಸರಿಸುತ್ತಿದೆ ಎಂದು ಮಂಗಳೂರಿನಲ್ಲಿ ಸ್ವಾಮೀಜಿಗಳ ಧರ್ಮ ಸಭೆಯಲ್ಲಿ ಆಕ್ರೋಶದ ಅಲೆ ಎದ್ದಿದೆ.
ರಾಜ್ಯ ಸರಕಾರ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ತೆಗೆದುಕೊಂಡಿದೆ. ಈ ಕ್ರಮವನ್ನು ಕೈ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಸ್ವಾಮೀಜಿ ಸಂತರೆಲ್ಲ ಒಟ್ಟಾಗಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ನಡೆದ ಧರ್ಮ ಸಭೆಯಲ್ಲಿ ಕರಾವಳಿಯ ಸ್ವಾಮೀಜಿಗಳು ಈ ಬಗ್ಗೆ ಒಕ್ಕೊರಲಿನ ನಿರ್ಣಯ ಪ್ರದರ್ಶಿಸಿದರು. ಸುದೀರ್ಘ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ , ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆ ರದ್ದತಿ ನಿರ್ಧಾರ ಖಂಡನೀಯ, ಗೋ ಹತ್ಯೆ ನಿಷೇಧ ರದ್ದು ಮಾಡಿದ್ರೆ ಗೋ ಸಂತತಿ ನಾಶವಾಗಲಿದೆ. ಈ ನಿರ್ಣಯ ಹಿಂದೂ ವಿರೋಧಿ ನಿರ್ಣಯ, ಇದರ ವಿರುದ್ದ ಹೋರಾಟಕ್ಕೆ ಸಿದ್ದ. ಸಂತರು ಉಪವಾಸ ಕೂತರೇ ಹಿಂದೂ ಸಮಾಜ ಎದ್ದೇಳಲಿದೆ. ಅದಕ್ಕೆ ಸರ್ಕಾರ ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ನಿರ್ಧಾರ ವಾಪಾಸ್ ಪಡೆಯಲಿ ಎಂದು ತಿಳಿಸಿದರು. ಸಪ್ಟೆಂಬರ್ ಹತ್ತರ ನಂತರ ರಾಜ್ಯಪಾಲರ ಭೇಟಿಯಾಗಿ ಮನವಿ ಸಲ್ಲಿಕೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆ ಬಳಿಕ ಕೇಂದ್ರ ಗೃಹ ಸಚಿವರು ಹಾಗೂ ಪ್ರಧಾನಿ ಭೇಟಿಗೂ ನಿರ್ಧಾರ ಮಾಡಲಾಗಿದೆ. ಸಭೆಯಲ್ಲಿ ಮಾಣಿಲ ಸ್ವಾಮೀಜಿ, ಕೇಮಾರು ಶ್ರೀ ಸೇರಿ ಹಲವು ಸಂತರು ಭಾಗಿಯಾಗಿದ್ದರು. ಅಲ್ಲದೆ ವಿಹೆಚ್ಪಿ, ಬಜರಂಗದಳ, ಆರ್ಎಸ್ಎಸ್ ನ ಪ್ರಮುಖರು ಪಾಲ್ಗೊಂಡಿದ್ದರು.