ನ್ಯೂಸ್ ನಾಟೌಟ್: ಮಂಗಳೂರಲ್ಲಿ ಎಂಡಿಎಂಎ ಮಾದಕವಸ್ತು ಹೊಂದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಫರಂಗಿಪೇಟೆ ಪುದು ಗ್ರಾಮದ ಅಮ್ಮೆಮಾರ್ ಮನೆ ಮಹಮ್ಮದ್ ಆಶ್ರಫ್ ಅಲಿಯಾಸ್ ಚೋಟಾ ಆಶ್ರಫ್(45), ಪೆರ್ಮನ್ನೂರು ಪಿಲಾರ್ ದಾರಂದಬಾಗಿಲು ಹೊಸಗದ್ದೆಯ ದಾವೂದ್ ಫರ್ವೆಝ್(36) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 55.5 ಗ್ರಾಂ ತೂಕದ 2,77,500 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಮೊಬೈಲ್ ಫೋನ್ ಗಳು-2, 3230 ರೂ., ಬೆಲೆನೊ ಕಾರು, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ 13,06,230 ರೂ. ಎಂದು ಅಂದಾಜು ಮಾಡಲಾಗಿದೆ.
ಇವರು ಬೆಂಗಳೂರಿನಿಂದ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಅನ್ನು ಬೆಂಗಳೂರಿನಿಂದ ಖರೀದಿಸಿ ತಂದು ಮಂಗಳೂರು ನಗರದ ನೆಹರೂ ಮೈದಾನ ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿಯ ಪಿಎ ಹೆಗಡೆ ನೇತೃತ್ವದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ಪೈಕಿ ಮೊಹಮ್ಮದ್ ಅಶ್ರಫ್ ಅಲಿಯಾಸ್ ಛೋಟಾ ಅಶ್ರಫ್ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ಗ್ರಾಮಾಂತರ ಠಾಣೆ ಹಾಗೂ ಬಂಟ್ವಾಳ ಠಾಣೆಯಲ್ಲಿ ಒಟ್ಟು 6 ಗಾಂಜಾ ಪ್ರಕರಣಗಳು ದಾಖಲಾಗಿದೆ. ಇನ್ನೋರ್ವ ಆರೋಪಿ ದಾವೂದ್ ಪರ್ವೇಸ್ ವಿರುದ್ದ ಮಂಗಳೂರು ಉತ್ತರ, ಮಂಗಳೂರು ಗ್ರಾಮಾಂತರ, ಕಾರ್ಕಳ, ಉಡುಪಿ ಸೆನ್ ಪೊಲೀಸ್ ಠಾಣೆಗಳಲ್ಲಿ ಒಟ್ಟು 6 ಗಾಂಜಾ ಪ್ರಕರಣಗಳು ದಾಖಲಾಗಿದೆ.