ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದಿದ್ದು ಅಲ್ಲದೇ ಆಕೆಯೇ ಆತ್ಮಹತ್ಯೆ ಮಾಡಕೊಂಡಿದ್ದಾಳೆ ಎಂದು ಮೃತದೇಹವನ್ನು ನೇಣಿಗೆ ಹಾಕಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ.ಆತ ತನ್ನ ಪತ್ನಿ ಹೇಮಾವತಿ (28)ಯನ್ನು ಕೊಂದು ತಪ್ಪಿಸಿಕೊಳ್ಳಲು ಯತ್ನಿಸಿ ವಿಫಲನಾಗಿದ್ದಾನೆ.
ಈ ಘಟನೆ ನಡೆದಿದ್ದು ಹಾಸನ ಜಿಲ್ಲೆಯ (Hasana News) ಚನ್ನರಾಯಪಟ್ಟಣ ತಾಲೂಕಿನ ಹೌಸಿಂಗ್ ಬೋರ್ಡ್ ಬಳಿ. ಗುರುರಾಜ್ ಕೊಲೆಗಾರ.ಈತ ಹತ್ತು ವರ್ಷಗಳ ಹಿಂದೆ ಚಿಕ್ಕಮಗಳೂರು ಮೂಲದ ಹೇಮಾವತಿ (28) ಅವರನ್ನು ಮದುವೆಯಾಗಿದ್ದ.ಆದರೆ ಮದುವೆಯಾದ ವರ್ಷದಿಂದಲೂ ಆತ ವರದಕ್ಷಿಣೆ ಹೆಸರಿನಲ್ಲಿ ನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಪತ್ನಿ ತವರು ಮನೆಗೆ ದೂರು ನೀಡಿದ್ದರೂ ಹಲವಾರು ಬಾರಿ ಮನೆಯವರು ಮಾತುಕತೆ ನಡೆಸಿದ್ದರು. ಆದರೆ ಈತನ ಚಟವನ್ನು ಮಾತ್ರ ಬಿಟ್ಟಿರಲಿಲ್ಲ.
ತನಗಿದ್ದ ಇಬ್ಬರು ಮಕ್ಕಳನ್ನು ಸಂಬಂಧಿಕರ ಮನೆಗೆ ಕಳುಹಿಸಿ ಇದೇ ಸರಿಯಾದ ಸಮಯವೆಂದು ಪತ್ನಿಯ ಜತೆಗೆ ಮತ್ತೆ ಜಗಳ ಆರಂಭಿಸಿದ್ದಾನೆ. ಕೊನೆಗೆ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.ಆಕೆ ಸಾಯುತ್ತಿದ್ದಂತೆ ಈತನಿಗೆ ಭಯ ಶುರುವಾಗಿದೆ. ಹತ್ಯೆ ಬಳಿಕ ಆತ ಮೃತದೇಹವನ್ನು ನೇತು ಹಾಕಿದ್ದಲ್ಲದೆ, ನನ್ನ ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಠಾಣೆಗೆ ಫೋನ್ ಮಾಡಿದ್ದಾನೆ.
ಕೂಡಲೇ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಗುರುರಾಜನ ಮೇಲೆಯೇ ಸಣ್ಣಗೆ ಸಂಶಯ ಬರಲುಆರಂಭವಾಯಿತು. ಅವರು ಆತನನ್ನು ವಶಕ್ಕೆ ಪಡೆದು ಕೋಲು ತೆಗೆದು ಬಾರಿಸಿದ ಬಳಿಕ ಕೊಲೆಯ ಕಥೆ ಹೊರಗೆ ಬಿತ್ತು.ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.