ನ್ಯೂಸ್ ನಾಟೌಟ್: ಕೊಡಗಿನಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಜಲ ಪ್ರಳಯ, ಬೆಟ್ಟ ಕುಸಿತದಂತಹ ಪ್ರಾಕೃತಿಕ ವಿಕೋಪ ಸಂಭವಿಸಿದೆ. ಇದರಲ್ಲಿ ಹಲವಾರು ಮಂದಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮತ್ತೆ ಕೆಲವು ಮಂದಿ ತಮ್ಮ ಆಸ್ತಿಪಾಸ್ತಿ ನಷ್ಟ ಅನುಭವಿಸಿ ಜೀವನವನ್ನೇ ಕಳೆದುಕೊಂಡಿದ್ದಾರೆ. ಈ ದುರ್ಘಟನೆ ಇನ್ನೂ ಜನಮನದಲ್ಲಿ ಮಾಸಿಲ್ಲ. ಈ ನಡುವೆಯೇ ಇಲ್ಲೊಬ್ಬ ಉದ್ಯಮಿ ಸುಮಾರು 50 ಎಕರೆ ಬೆಟ್ಟವನ್ನು ಬೃಹತ್ ಜೆಸಿಬಿ ಯಂತ್ರಗಳ ಮೂಲಕ ಅಗೆದು ಮರಗಿಡ ಪಕ್ಷಿ ವೈವಿಧ್ಯ ಸಂಕುಲವನ್ನು ಸರ್ವನಾಶ ಮಾಡಿದ್ದಾನೆ. ಮಾತ್ರವಲ್ಲ ಮನುಕುಲಕ್ಕೆ ಸಂಚು ತರುವ ಅಪಾಯವನ್ನು ತಂದೊಡ್ಡಿದ್ದಾನೆ. ಇದೆಲ್ಲವೂ ಜಿಲ್ಲಾಧಿಕಾರಿಗಳ ಕಚೇರಿಯ ಅಣತಿ ದೂರದಲ್ಲಿಯೇ ನಡೆದಿದ್ದು ಜನ ಇದೀಗ ಉದ್ಯಮಿಯ ನಡೆಯನ್ನು ಪ್ರಶ್ನಿಸಿದ್ದಾರೆ.
ಮಡಿಕೇರಿಯ ಮಂಗಳಾದೇವಿ ನಗರದಲ್ಲಿರುವ 50 ಎಕರೆ ಬೆಟ್ಟವನ್ನು ಆಂಧ್ರಪ್ರದೇಶ ನೆಲ್ಲೂರು ಮೂಲದ ಉದ್ಯಮಿಗಳು ಖರೀದಿ ಮಾಡಿದ್ದಾರೆ. ವೆಂಕಟೇಶ್ವರ ರೆಡ್ಡಿ ಮತ್ತು ಅಪ್ಪಾ ರಾವ್ ಖರೀದಿ ಮಾಡಿರುವ ಬೆಟ್ಟವನ್ನು ಇದೀಗ ಖಾಸಗಿ ವಿಲ್ಲಾಗಳ ನಿರ್ಮಾಣಕ್ಕಾಗಿ ಬೃಹತ್ ಜೆಸಿಬಿ ಯಂತ್ರಗಳನ್ನು ತಂದು ಅಗೆಯಲಾಗಿದೆ. ಖಾಸಗಿ ಜಮೀನು ಆದರೂ ಮರಗಳನ್ನು ಕಡಿದು ಪರಿಸರಕ್ಕೆ ಹಾನಿ ಮಾಡುವ ಹಕ್ಕು ಇರುವುದಿಲ್ಲ. ಆದರೆ ಉದ್ಯಮಿಗಳು ಸೂಕ್ಷ್ಮ ಪ್ರದೇಶ ಎಂದು ಭೂವಿಜ್ಞಾನಿಗಳ ವರದಿಯಲ್ಲಿ ಪ್ರಸ್ತಾಪಿಸಿದ ಈ ಪ್ರದೇಶದಲ್ಲಿ ಬೆಟ್ಟ ನಾಶ ಮಾಡುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮಳೆಗಾಲದಲ್ಲಿ ಭೂಕುಸಿತ ಸಾಧ್ಯತೆಯಿರುವುದರಿಂದ ಬೆಟ್ಟದ ತಪ್ಪಲಿನ ನಿವಾಸಿಗಳಿಗೆ ಇದೀಗ ಆತಂಕ ಶುರುವಾಗಿದೆ. ಈ ಬೆಟ್ಟದಲ್ಲಿ ಹಲವು ನೈಸರ್ಗಿಕ ನೀರಿನ ಸೆಲೆಗಳು ಇದ್ದವು. ಆದರೆ ಈಗ ಜೆಸಿಬಿ ಯಂತ್ರಗಳ ಸಹಾಯದಿಂದ ನೈಸರ್ಗಿಕ ನೀರಿನ ಸೆಲೆಗಳನ್ನು ಮುಚ್ಚಿ ಹಾಕಲಾಗಿದೆ. ಇದೀಗ ನಂದಾ ಕಾರ್ಯಪ್ಪ ಅನ್ನುವವರು ನಗರಸಭೆಗೆ ದೂರು ನೀಡಿದ್ದಾರೆ.