ನ್ಯೂಸ್ ನಾಟೌಟ್ : ಪ್ರೀತಿಸುತ್ತಿದ್ದ ಜೋಡಿಯನ್ನು ಯುವತಿಯ ಹೆತ್ತವರು ಕೊಂದು ಮೊಸಳೆಗಳಿಗೆ ಆಹಾರವಾಗಿ ಬಿಸಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶ ರಾಜ್ಯದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.
ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಯುವತಿಯ ಪೋಷಕರು ಕೊಂದು ಹಾಕಿದ್ದರು. ಬಳಿಕ ಅವರಿಬ್ಬರ ದೇಹಕ್ಕೆ ಕಲ್ಲು ಕಟ್ಟಿ ಚಂಬಲ್ ನದಿಗೆ ಎಸೆದಿದ್ದರು. ಈ ನದಿಯಲ್ಲಿ ಮೊಸಳೆಗಳ ಓಡಾಟ ವಿಪರೀತ ಇರುವ ಕಾರಣ, ಶವಗಳನ್ನು ಮೊಸಳೆಗಳು ತಿನ್ನಲಿ ಎಂದು ಆರೋಪಿಗಳು ಈ ಕೃತ್ಯ ಎಸಗಿದ್ದರು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಯುವತಿಯ ಪೋಷಕರನ್ನು ಬಂಧಿಸಿರುವ ಮಧ್ಯಪ್ರದೇಶ ಪೊಲೀಸರು, ಶವಗಳನ್ನು ಎಲ್ಲಿ ಎಸೆದಿದ್ದರು ಎಂದು ವಿಚಾರಣೆ ನಡೆಸಿ ಇದೀಗ ಶವಗಳನ್ನು ಎಸೆದಿದ್ದ ಸ್ಥಳದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ವೃತ್ತಿಪರ ಡೈವರ್ಗಳ ನೆರವಿನಿಂದ ನದಿಯ ತಳಭಾಗದಲ್ಲಿ ಶವಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಮೊರೆನಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಆದರೆ ಎಷ್ಟು ಹುಡುಕಾಟ ನಡೆಸಿದರೂ ಶವಗಳು ಸಿಗುತ್ತಿಲ್ಲ ಎನ್ನಲಾಗಿದೆ.
2 ವಾರಗಳ ಹಿಂದೆ ಯುವತಿಯ ಪೋಷಕರು ಈ ಕೃತ್ಯ ಎಸಗಿದ್ದರು ಎಂದು ತಿಳಿದು ಬಂದಿದೆ. ಯುವತಿಯ ಪೋಷಕರಿಗೆ ಅವರ ಕೆಲವು ಸಂಬಂಧಿಕರೂ ನೆರವು ನೀಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಪರಸ್ಪರ ಪ್ರೀತಿಸುತ್ತಿದ್ದ ಯುವಕ ಹಾಗೂ ಯುವತಿ ಒಟ್ಟಿಗೆ ಇದ್ದಾಗ ಅವರನ್ನು ಸೆರೆ ಹಿಡಿದ ಯುವತಿಯ ಕುಟುಂಬಸ್ಥರು, ಇಬ್ಬರ ಮೇಲೂ ಗುಂಡು ಹಾರಿಸಿ ಕೊಂದಿದ್ದಾರೆ. ಬಳಿಕ ಇಬ್ಬರ ಶವಕ್ಕೂ ಭಾರವಾದ ಕಲ್ಲುಗಳನ್ನು ಕಟ್ಟಿ, ಮೊಸಳೆಗಳ ಸಂಚಾರ ಇರುವ ಚಂಬಲ್ ನದಿಯ ನಿರ್ಜನ ಪ್ರದೇಶವನ್ನು ಗುರ್ತಿಸಿ ಅಲ್ಲಿಯೇ ನದಿಯೊಳಗೆ ಶವಗಳನ್ನು ಎಸೆದಿದ್ದರು ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 3ರಿಂದ ಈ ಜೋಡಿ ನಾಪತ್ತೆಯಾಗಿತ್ತು. ಯುವಕ ರಾಧೆಶ್ಯಾಂ ತೋಮರ್ನ ಕುಟುಂಬಸ್ಥರು ಶಿವಾನಿ ತೋಮರ್ ಹೆತ್ತವರ ವಿರುದ್ಧ ಆರೋಪ ಮಾಡುತ್ತಿದ್ದರು. ಹಲವು ದಿನದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದ್ದು, ಆದರೆ ಶವ ಇನ್ನೂ ಸಿಗಲಿಲ್ಲ. ಈ ಪ್ರಕರಣ ಸಂಬಂಧ ಮಧ್ಯಪ್ರದೇಶ ರಾಜ್ಯದ ಮೊರೆನಾ ಜಿಲ್ಲೆಯ ಅಂಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.