ನ್ಯೂಸ್ ನಾಟೌಟ್: ‘ಹುಟ್ಟು ಹುಟ್ಟುತ್ತಾ ಅಣ್ಣ -ತಮ್ಮಂದಿರು ಬೆಳೆ ಬೆಳೆಯುತ್ತಾ ದಾಯಾದಿಗಳು’ ಅನ್ನುವ ಮಾತಿದೆ. ಕಲಿಯುಗದಲ್ಲಿ ಈ ಮಾತು ಅಕ್ಷರಶಃ ನಿಜ ಅನ್ನುವುದು ಹಲವು ಸಲ ಸಾಬೀತಾಗಿದೆ. ಆದರೆ ಇದೆಲ್ಲವನ್ನು ಮೀರಿ ಒಡ ಹುಟ್ಟಿದ ಅಣ್ಣನಿಗಾಗಿ ತನ್ನ ಪ್ರಾಣವನ್ನೇ ಕೊಡುವ ತಮ್ಮನೂ ಇರುತ್ತಾನೆ ಅನ್ನುವುದು ನಿರೂಪಿತವಾಗಿದೆ.
ಹೌದು, ಇಲ್ಲೊಬ್ಬ ಅಣ್ಣನಿಗೆ ಹಾವು ಕಚ್ಚಿದ್ದನ್ನು ಕಂಡ ತಮ್ಮ ತನ್ನ ಜೀವದ ಹಂಗನ್ನು ತೊರೆದು ಬಾಯಿಯಿಂದ ವಿಷವನ್ನ ಹೀರಿ ಸಂಭವನೀಯ ಅಪಾಯದಿಂದ ತಮ್ಮನನ್ನು ಪಾರು ಮಾಡಿದ್ದಾನೆ. ಕೊಕ್ಕಡ ಗ್ರಾಮದ ಮುಂಡೂರುಪಲ್ಕೆಯಲ್ಲಿ ಘಟನೆ ನಡೆದಿದೆ. ತಮ್ಮನ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕುರ್ಲೆ ನಿವಾಸಿ ತಿಮ್ಮಯ್ಯ ಮಲೆಕುಡಿಯ ಮತ್ತು ಸುಧಾ ದಂಪತಿಯ ಪುತ್ರ ಗಣೇಶ್ ಕೆ. ಅಣ್ಣನ್ನು ಬದುಕಿಸಿದವರು. ಇವರ ಅಣ್ಣ ಸಂತೋಷ್ (25ವ) ಹಾವು ಕಚ್ಚಿ ವಿಷವೇರಿತ್ತು. ಈ ಸಮಯದಲ್ಲಿ ತಮ್ಮನ ಸಕಾಲಿಕ ಪ್ರಥಮ ಚಿಕಿತ್ಸೆಯಿಂದ ಅಣ್ಣ ಬದುಕುಳಿದಿದ್ದಾನೆ.
ಮುಂಡೂರುಪಲ್ಕೆ ನಿವಾಸಿ ಗಣೇಶ್ ಕೆ. ಅವರು ಪದವಿ ಶಿಕ್ಷಣದ ಬಳಿಕ ಉಜಿರೆ ರುಡ್ಸೆಟ್ನಲ್ಲಿ ಜೇನುಕೃಷಿ ತರಬೇತಿಯನ್ನು ಪಡೆದುಕೊಂಡಿದ್ದರು. ಇದರಲ್ಲೇ ನೆಮ್ಮದಿಯ ಬದುಕು ಕಾಣುವ ಕನಸು ಅವರದ್ದಾಗಿತ್ತು. ತಮ್ಮ ಜೇನು ಪೆಟ್ಟಿಗೆಗೆ ಸ್ಥಳೀಯ ಕಾಡಿನಲ್ಲಿ ಜೇನು ಕುಟುಂಬವನ್ನು ಹುಡುಕಿ ಪೆಟ್ಟಿಗೆಯಲ್ಲಿ ಕೂರಿಸುವ ಕಾರ್ಯವನ್ನು ಮಾಡಲು ನಿರ್ಧರಿಸಿದ್ದರು. ಅದರಂತೆ ಮೇ 30ರಂದು ಅಣ್ಣ ಸಂತೋಷ್ ಹಾಗೂ ತಮ್ಮ ಗಣೇಶ್ ಕೆ. ಅವರು ತಮ್ಮ ಮನೆಯ ಸಮೀಪದ ಕಾಡಿಗೆ ಜೇನು ಕುಟುಂಬ ಹುಡುಕಾಟಕ್ಕೆ ತೆರಳಿದ್ದರು. ಕಾಡಿನಲ್ಲಿ ಹಲವು ದೂರ ಸಾಗಿದರು.
ದಟ್ಟ ಕಾಡಿನಲ್ಲಿ ಇವರಿಗೆ ಇದ್ದಕ್ಕಿದ್ದಂತೆ ಮಲಬಾರ್ ಗುಳಿ ಮಂಡಲ ಕೈಗೆ ಕಚ್ಚಿದೆ. ಹಾವು ಕಚ್ಚಿದ ಕೆಲವೇ ಸಮಯದಲ್ಲಿ ಅವರು ತೀವ್ರ ಅಸ್ವಸ್ಥರಾದರು. ಈ ವಿಷಯ ತಮ್ಮ ಗಣೇಶ್ ಗಮನ ಬರುತ್ತಿದ್ದಂತೆ ಅವರು ಹಾವು ಕಚ್ಚಿದ ಜಾಗದ ಸ್ವಲ್ಪ ಮೇಲಕ್ಕೆ ಬಟ್ಟೆ ಕಟ್ಟಿದರು. ಬಳಿಕ ಬಾಯಿಯಿಂದ ಮೂರ್ನಾಲು ಬಾರಿ ವಿಷವನ್ನು ಹೀರಿ ಹೊರಕ್ಕೆ ಉಗಿದರು. ಬಳಿಕ ಅಣ್ಣನನ್ನು ಹೆಗಲ ಮೇಲ ಹಾಕಿಕೊಂಡು ನಾಟಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಸಂತೋಷ್ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.