ನ್ಯೂಸ್ ನಾಟೌಟ್ : ಭಾಗಮಂಡಲದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೊಡಗು ಜಿಲ್ಲೆ ಏಕೈಕ ಮೇಲೇತ್ಸುವೆ ಕಾಮಗಾರಿ ಇನ್ನೂ ವಿಳಂಬವಾಗುವ ಸಾಧ್ಯತೆ ಇದೆ. ಭಾಗಮಂಡಲದಲ್ಲಿ ಇನ್ನೂ ಮಳೆ ಬಿರುಸು ಪಡೆದಿಲ್ಲ. ಒಮ್ಮೆ ಬಿರುಸು ಪಡೆಯಿತೆಂದರೆ ಒಂದೆರಡು ತಿಂಗಳು ವಾಹನ ಸಂಚರಿಸುವುದಕ್ಕೂ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಮಳೆ ಅಬ್ಬರಿಸುತ್ತದೆ. ಸುತ್ತಲ ರಸ್ತೆಗಳೆಲ್ಲ ನೀರಿನಲ್ಲಿ ಮುಳುಗುತ್ತದೆ. ಗದ್ದೆ ತೋಟಗಳು ಕೂಡ ನೀರಿನಿಂದ ಆವೃತ್ತವಾಗುತ್ತದೆ. ಇಂತಹ ಸ್ಥಿತಿಯಲ್ಲಿ ಮಳೆಗಾಲಕ್ಕೂ ಮೊದಲು ಕಾಮಗಾರಿ ಪೂರ್ಣಗೊಳ್ಳದಿರುವುದು ಜನರನ್ನು ದೊಡ್ಡ ಆತಂಕವನ್ನು ತರಿಸಿದೆ.
ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದರೂ, ಮಳೆಗಾಲದಲ್ಲಿ ಸಾರ್ವಜನಿಕರ ಬಳಕೆಗೆ ಲಭಿಸುವುದು ಕನಸಾಗಿಯೆ ಉಳಿದಿದೆ ಎಂದು ಸ್ಥಳೀಯರು ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಇದೀಗ ಮುಂಗಾರು ಕಾಲಿಸಿದ್ದರೂ ಭಾಗಮಂಡಲದಲ್ಲಿ ಮಳೆ ಬಿರುಸು ಪಡೆದಿಲ್ಲ. ನಡು ಮಳೆಗಾಲದಲ್ಲಿ ಮಳೆ ಬಿರುಸುಗೊಂಡು ಕಾವೇರಿ ಜಲಾವೃತವಾದಾಗ ಸಂಚಾರಕ್ಕೆ ಮೇಲ್ಸೇತುವೆ ಲಭಿಸಿದರೆ ಜನರಿಗೆ ಅನುಕೂಲವಾಗುತ್ತಿತ್ತು. ಆದರೆ, ಈ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ. ತಲಕಾವೇರಿ ಪುಣ್ಯಕ್ಷೇತ್ರ ಭಾಗಮಂಡಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಎರಡು, ಮೂರು ತಿಂಗಳ ಕಾಲ ನಿರಂತರ ಸಂಪರ್ಕ ಕಡಿತಗೊಳ್ಳುತ್ತಿದ್ದು, ಗ್ರಾಮಸ್ಥರ ಸಮಸ್ಯೆಯನ್ನು ನೀಗಿಸಲು ₹ 26.86 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ಕಾಮಗಾರಿಗೆ ಹಸಿರು ನಿಶಾನೆ ನೀಡಲಾಯಿತು. 2018ರಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು 2019ರ ಜನವರಿಯಲ್ಲಿ ಮೇಲ್ಸೆತುವೆ ಕಾಮಗಾರಿ ಆರಂಭಗೊಂಡಿತು. ತೇಜಸ್ ಇನ್ಫ್ರೋ ಪ್ರೈವೇಟ್ ಲಿಮಿಟೆಡ್ ಮೇಲ್ಸೇತುವೆ ಗುತ್ತಿಗೆ ಪಡೆದಿದ್ದು ಜಿಲ್ಲೆಯಲ್ಲಿ ಮೊದಲ ಮೇಲ್ಸೇತುವೆಯಾಗಿ ಕಾಮಗಾರಿ ಆರಂಭಗೊಂಡಿತು. ಕೋವಿಡ್ ಮತ್ತು ಮಳೆಗಾಲದ ಹಿನ್ನೆಲೆಯಲ್ಲಿ ಕೆಲವು ತಿಂಗಳು ಕೆಲಸ ಕಾರ್ಯ ಸ್ಥಗಿತಗೊಂಡದ್ದರಿಂದ 18 ತಿಂಗಳ ಕಾಮಗಾರಿ 43 ತಿಂಗಳ ಕಾಲ ಸಾಗಿದ್ದು ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಒಟ್ಟು ₹ 35.86 ಕೋಟಿ ಮೊತ್ತ ಈ ಕಾಮಗಾರಿಗೆ ಬಳಕೆ ಆಗುತ್ತಿದ್ದು, ಮೇಲ್ಸೇತುವೆ ಡಾಂಬರೀಕರಣ ಹಾಗೂ ದೀಪದ ವ್ಯವಸ್ಥೆಗಳು ಮುಕ್ತಾಯಗೊಂಡಿವೆ.