ನ್ಯೂಸ್ ನಾಟೌಟ್: ಕಳ್ಳನೊಬ್ಬ ಬೆಳ್ ಬೆಳಗ್ಗೆ ಅಂಗಡಿಯೊಂದರಿಂದ ಹಂಚು ಎಗರಿಸಿ ಪರಾರಿಯಾಗಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿಯಿಂದ ವರದಿಯಾಗಿದೆ.
ಮಲ್ಲಿಕಾ ಎಂಟರ್ಪ್ರೈಸಸ್ನ ಮಾಲೀಕರಾಗಿರುವ ಗಂಗಾಧರ ಎಸ್ ಡಿ ಅವರ ಅಂಗಡಿಯಲ್ಲಿ ಸೋಮವಾರ ಬೆಳ್ ಬೆಳಗ್ಗೆ ಹಂಚು ಕಳ್ಳತನ ಆಗಿದೆ. ಎಂದಿನಂತೆ ಅಂಗಡಿ ಮಾಲೀಕರು ಬೆಳಗ್ಗೆ ಬಂದು ಹಂಚು ದಾಸ್ತಾನು ಇಟ್ಟ ಜಾಗದಲ್ಲಿ ಪರಿಶೀಲಿಸಿದಾಗ ಒಟ್ಟು ಐವತ್ತು ಹಂಚುಗಳು ಕಡಿಮೆ ಇರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ Ka 19 z 8363 ಓಮಿನಿ ಕಾರಿನಲ್ಲಿ ಬಂದ ವ್ಯಕ್ತಿ ಹಂಚು ಕದಿಯುತ್ತಿರುವ ದೃಶ್ಯ ಸೆರೆಯಾಗಿದೆ. ತಕ್ಷಣ ಅಂಗಡಿ ಮಾಲೀಕರು ಆರ್ಟಿಒ ಆಫೀಸ್ನಿಂದ ವಾಹನ ಮಾಲೀಕನ ನಂಬರ್ ಪಡೆದು ಕರೆ ಮಾಡಿದ್ದಾರೆ.
ಆಗ ಆ ವ್ಯಕ್ತಿ ಉಮೇಶ್ ಅನ್ನುವವರು ಎಂದು ತಿಳಿದು ಬಂದಿದೆ. ಸದ್ಯ ಆ ವ್ಯಕ್ತಿಯು ತಾನು ತೆಗೆದಿಲ್ಲ ಎಂದು ಹೇಳುತ್ತಿರುವುದರಿಂದ ಅಂಗಡಿ ಮಾಲೀಕರು ಕಲ್ಲುಗುಂಡಿ ಪೊಲೀಸ್ ಉಪ ಠಾಣೆ ಮೆಟ್ಟಿಲೇರಿ ತಮ್ಮ ದೂರನ್ನು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.