ನ್ಯೂಸ್ ನಾಟೌಟ್: ಕಲ್ಲಪಳ್ಳಿಯಲ್ಲಿ ಎರಡು ವರ್ಷಗಳ ಹಿಂದೆ ಹಲವರನ್ನು ಬಲಿ ಪಡೆದ ಬಸ್ ಅಪಘಾತ ನಡೆದ ಸ್ಥಳದಲ್ಲಿಯೇ ಇದೀಗ ಪೆಟ್ರೋಲ್ ತುಂಬಿದ ಟ್ಯಾಂಕರ್ ಲಾರಿಯೊಂದು ಪಲ್ಟಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದಿದ್ದುದರಿಂದ ಸಂಭವನೀಯ ಭಾರಿ ದುರಂತವೊಂದು ತಪ್ಪಿದೆ. ಬಡ್ಡಡ್ಕ ಕಲ್ಲಪಳ್ಳಿ ಮಾರ್ಗವಾಗಿ ಕೇರಳದ ಪಾಣತ್ತೂರು ಕಡೆಗೆ ಸಂಚರಿಸುತ್ತಿದ್ದ ಟ್ಯಾಂಕರ್ ಲಾರಿ ಇದಾಗಿತ್ತು ಎಂದು ತಿಳಿದು ಬಂದಿದೆ. ಪೆರಿಯಾರ್ ಎಂಬಲ್ಲಿ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಣತಿ ದೂರದಲ್ಲಿದ್ದ ಮನೆಗೆ ಲಾರಿ ಮಗುಚಿ ಬಿದ್ದಿದೆ. ಲಾರಿಯಲ್ಲಿ ಒಟ್ಟು ಮೂರು ಮಂದಿ ಇದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.
ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಕೆಳಗೆ ಇದ್ದ ಮನೆಯ ಮೇಲೆ ಮಗುಚಿ ಬಿದ್ದಿದೆ. ಪೆಟ್ರೋಲ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ನಲ್ಲಿ ಒಟ್ಟು 3 ಮಂದಿ ಇದ್ದರು. ಈಗಾಗಲೇ ಸ್ಥಳೀಯರ ಕಾರ್ಯಾಚರಣೆಯಲ್ಲಿ 3 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.
ಇದೇ ಜಾಗದಲ್ಲಿ 2021ರ ಜನವರಿಯಲ್ಲಿ ಮದುವೆ ದಿಬ್ಬಣ ಹೊರಟಿದ್ದ ಬಸ್ ಘಾಟ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಯ ಮೇಲೆ ಉರುಳಿ ಬಿದ್ದಿತ್ತು. ಎಂಟು ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಕೊಡಗಿನ ಕರಿಕೆಯ ಚೆತ್ತುಕಯದಲ್ಲಿ ವರನ ಮನೆಯಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆಂದು ಪುತ್ತೂರಿನಿಂದ ತೆರಳುತ್ತಿದ್ದ ಬಸ್ ಕಾಸರಗೋಡಿನ ಕಲ್ಲಪಳ್ಳಿಯ ಪೆರಿಯಾರಂನಲ್ಲಿ ಉರುಳಿ ಬಿದ್ದಿತ್ತು. ದುರ್ಘಟನೆಯಲ್ಲಿ ಎಂಟು ಮಂದಿ ಬಲಿಯಾಗಿದ್ದರು. ಸಾವಿಗೀಡಾದವರ ಪೈಕಿ ಮಹಿಳೆಯರೇ ಹೆಚ್ಚಾಗಿದ್ದರು.