ನ್ಯೂಸ್ ನಾಟೌಟ್: ಕೆಲವರು ಸುಳ್ಳು ಹೇಳಿಕೊಂಡು ಇನ್ನೊಬ್ಬರಿಗೆ ಮೋಸ ಮಾಡಿಕೊಂಡೇ ಜೀವನ ಕಳೆಯುತ್ತಿರುತ್ತಾರೆ. ಅಮಾಯಕ ಜನರನ್ನು ವಂಚಿಸಿ ಬದುಕುವುದೇ ಕೆಲವರ ಗುರಿಯಾಗಿರುತ್ತದೆ. ಹಾಗೆ ವಂಚಿಸುವುದಕ್ಕೆ ಮುಂದಾದ ನಕಲಿ ಮಂತ್ರವಾದಿಗಳನ್ನು ಜನರೇ ಹಿಡಿದು ಚೆನ್ನಾಗಿ ಥಳಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ವಳಾಲು ಎಂಬಲ್ಲಿ ನಡೆದಿದೆ.
ಮುಸ್ಲಿಂ ಕುಟುಂಬವೊಂದು ತಮ್ಮ ಮಗುವಿಗೆ ಅನಾರೋಗ್ಯ ಎಂದು ಆಸ್ಪತ್ರೆಗೆ ಅಲೆದಾಡಿದರು. ಆದರೆ ಮಗುವಿನ ಆರೋಗ್ಯ ಮಾತ್ರ ಕೊಂಚವೂ ಸುಧಾರಿಸಿರಲಿಲ್ಲ. ಹೀಗಾಗಿ ತಲೆಕೆಡಿಸಿಕೊಂಡ ಮುಸ್ಲಿಂ ಕುಟುಂಬವು ಮಂತ್ರವಾದಿಗಳ ಸಂಪರ್ಕ ಮಾಡಿತ್ತು. ಮನೆಗೆ ಬಂದಿದ್ದ ಮಂತ್ರವಾದಿಗಳು ಮಗುವಿಗೆ ಕಪ್ಪು ನೂಲು ಮಂತ್ರಿಸಿ ಕಟ್ಟಿ ಹೋಗಿದ್ದರು. ಆದರೆ ವಾರ ಕಳೆದರೂ ಆ ಮಗುವಿಗೆ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಆಗಿರಲಿಲ್ಲ.
ಈ ಮಧ್ಯೆ ಮತ್ತೊಮ್ಮೆ ಮಂತ್ರಿವಾದಿಗಳಿಬ್ಬರು ಮಗುವಿನ ಮನೆಗೆ ಬಂದಿದ್ದರು. ಈ ವೇಳೆ ಆ ಕುಟುಂಬಸ್ಥರಿಗೂ, ನಕಲಿ ಮಂತ್ರವಾದಿಗಳಿಗೂ ಪರಿಚಯವಿದ್ದ ವ್ಯಕ್ತಿಯೊಬ್ಬರು ಆ ಸಮಯಕ್ಕೆ ಅಲ್ಲಿಗೆ ಬಂದಿದ್ದರು. ಈ ಮಂತ್ರವಾದಿಗಳ ಕಂಡೊಡನೆ ಆ ವ್ಯಕ್ತಿ ಶಾಕ್ ಆಗಿದ್ದಾರೆ. ಈ ನಕಲಿ ವೇಷಧಾರಿಗಳು ತಬ್ಬಿಬ್ಬಾಗಿದ್ದರು. ಗುಜರಿ ಕೆಲಸ ಮಾಡುತ್ತಿದ್ದವರು ಮಂತ್ರವಾದಿಗಳಾದವರು ಅನ್ನುವುದು ತಿಳಿದು ಬರುತ್ತದೆ. ಮಂತ್ರವಾದಿಯ ಸೋಗಿನಲ್ಲಿ ಬಂದು ವಂಚನೆ ಮಾಡುತ್ತಿರುವುದು ತಿಳಿದು ಬಂದಿದೆ. ಇದರಿಂದ ಸಿಟ್ಟಾದ ಆ ವ್ಯಕ್ತಿ ಮನೆಯಲ್ಲೇ ಕೂಡಿ ಹಾಕಿ ನಕಲಿ ಮಂತ್ರವಾದಿಗಳಿಗೆ ಥಳಿಸಿದ್ದಾರೆ. ಯುವಕರು ಬ್ಯಾರಿ ಭಾಷೆಯಲ್ಲಿ ಮಾತನಾಡುತ್ತಾ ನಕಲಿ ಮಂತ್ರಿವಾದಿಗಳಿಗೆ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೊ ವೈರಲ್ ಆಗಿದೆ.