ನ್ಯೂಸ್ ನಾಟೌಟ್ :ಅಲ್ಲಲ್ಲಿ ಅಕ್ರಮ ಕಸಾಯಿಖಾನೆಗಳು,ಗಬ್ಬು ನಾರುತ್ತಿದೆ ಪರಿಸರ,ಎಲ್ಲೆಂದರಲ್ಲಿ ಎಸೆಯುತ್ತಿರುವ ತ್ಯಾಜ್ಯ. ಹೌದು,ಇಂತಹ ಆರೋಪ ಕೇಳಿ ಬಂದಿರೋದು ಕಡಬದ ಗೋಳಿತ್ತಡ- ಏಣಿತಡ್ಕ ರಸ್ತೆಯ ತ್ರಿವೇಣಿ ಸರ್ಕಲ್ ಬಳಿಯಲ್ಲಿಂದ. ಇದಕ್ಕೆ ಸಂಬಂಧಿಸಿದಂತೆ ದನದ ಕಾಲಿನ ಎಲುಬು ಪತ್ತೆಯಾಗಿದ್ದು, ಅಕ್ರಮ ಕಸಾಯಿಖಾನೆ ಕಾರ್ಯಾಚರಿಸುತ್ತಿದೆ ಎಂಬುದಕ್ಕೆ ಪುಷ್ಠಿ ನೀಡಿದೆ.
ಗ್ರಾಮದ ಕುದುಳೂರು, ಕೊರೆಪದವು, ಕಲಾಯಿ, ಕೊಯಿಲ ಗೇಟ್ ಬಳಿ, ಜನತಾ ಕಾಲೋನಿ, ಆತೂರು ಬೈಲು, ಪೂರಿಂಗ ಮುಂತಾದೆಡೆ ಅಕ್ರಮ ಕಸಾಯಿಖಾನೆಗಳು ಕಾಯಾಚರಿಸುತ್ತಿವೆ ಎಂಬ ದೂರುಗಳು ಕೇಳಿ ಬಂದಿವೆ. ಅಕ್ರಮವಾಗಿ ಗೋವಧೆ ನಿರಂತರವಾಗಿ ನಡೆಯುತ್ತಿದೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸುತ್ತಿವೆ. ರಾತ್ರೋ ರಾತ್ರಿ ಗೋವುಗಳನ್ನು ತಂದು ವಧೆ ಮಾಡಿ ಮಾಂಸ ಮಾಡಿ ಬೆಳಗಾಗುವುದರೊಳಗೆ ಹದ ಮಾಡಿದ ಮಾಂಸಗಳನ್ನು ನಿಗದಿತ ಪ್ರದೇಶಗಳಿಗೆ ಸಾಗಾಟ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಕೆಲವು ಅಕ್ರಮ ಕೇಂದ್ರಗಳಲ್ಲಿನ ಗೋವಿನ ತ್ಯಾಜ್ಯಗಳನ್ನು ಹತ್ತಿರದ ಕುಮಾರಧಾರ ನದಿಗೆ ಎಸೆಯಲಾಗುತ್ತಿದ್ದು ಅಲ್ಲಿ ಮೊಸಳೆಗಳಿಗೆ ಆಹಾರವಾಗುತ್ತಿದೆ. ಇದರಿಂದಾಗಿ ನದಿಯಲ್ಲಿ ಮೊಸಳೆಗಳ ಸಂಖ್ಯೆ ಅಧಿಕವಾಗುತ್ತಿದ್ದು ಸ್ಥಳೀಯ ಜನ ಆತಂಕದಲ್ಲಿ ಬದುಕುವಂತಾಗಿದೆ ಎಂದು ಹೇಳಲಾಗಿದೆ. ಇನ್ನು ಕೆಲವು ಅಕ್ರಮ ಕೇಂದ್ರಗಳಲ್ಲಿ ತ್ಯಾಜ್ಯಗಳನ್ನು ಹತ್ತಿರದ ಗುಡ್ಡ, ಬಯಲು ಪ್ರದೇಶ, ತೋಡು, ಕಾಡು ಪ್ರದೇಶಗಳಲ್ಲಿ ಎಸೆಯಲಾಗುತ್ತದೆ. ಇವುಗಳನ್ನು ನಾಯಿಗಳು ಎಲ್ಲೆಂದರಲ್ಲಿ ಹೊತ್ತುಕೊಂಡು ಹೋಗಿ ಪರಿಸರದ ತುಂಬೆಲ್ಲಾ ಹರಡುತ್ತವೆ. ಇದರ ಪರಿಣಾಮ ಈಗ ನೂರಾರು ವಾಹನ ಸಂಚರಿಸುವ ರಸ್ತೆಯಲ್ಲಿ ದನದ ಎಲುಬು ಕಾಣ ಸಿಗುವಂತಾಗಿದೆ. ಎರಡು ವರ್ಷದ ಹಿಂದೆ ಕುದುಳೂರು ಬಳಿಯ ಪದವು ಪರಂಗಾಜೆ ಕ್ರಾಸ್ ಬಳಿ ಗೋವಿನ ಎಲುಬು ಹಾಗು ತ್ಯಾಜ್ಯಗಳನ್ನು ಎಸೆಯಲಾಗಿತ್ತು. ಇದೀಗ ಮತ್ತೆ ರಸ್ತೆಯಲ್ಲಿ ಎಲುಬು ಕಾಣಿಸಿಕೊಂಡು ಹಿಂದೂ ಸಂಘಟನೆಗಳ ಅಕ್ರೋಶಕ್ಕೆ ಕಾರಣವಾಗಿದೆ.
ಗೋವಿನ ಮಾಂಸ ಮಾಡಿ ಉಳಿಯುವ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಪೊದೆಗಳ ಮಧ್ಯೆ ಎಸೆಯುವುದರಿಂದ ಅಲ್ಲಿಗೆ ಕಾಡು ಹಂದಿಗಳು ಬಂದು ತಿನ್ನತೊಡಗುತ್ತವೆ. ಮೊದಲೆ ಕಾಡುಹಂದಿಗಳಿಗೆ ಆಹಾರದ ಅಭಾವ ಇದ್ದು ಗೋವಿನ ಮಾಂಸದ ತ್ಯಾಜ್ಯ ಅವುಗಳಿಗೆ ಮೃಷ್ಠಾನ್ನವಾಗುತ್ತಿದೆ. ಇದರಿಂದಾಗಿ ಕೊಯಿಲ ಪ್ರದೇಶಗಳಲ್ಲಿ ಕಾಡು ಹಂದಿಗಳ ಸಂಖ್ಯೆ ದಿನದಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಾಡು ಹಂದಿಗಳು ಹೆಚ್ಚು ಹೆಚ್ಚಾಗಿ ರೈತರ ತೋಟಗಳಿಗೆ ಬಂದು ಕೃಷಿ ನಾಶ ಮಾಡಿ ಅಟ್ಟಹಾಸ ಮೆರೆಯುತ್ತಿವೆ. ರೈತಾಪಿ ವರ್ಗ ಕಾಡುಹಂದಿಗಳ ಕಾಟದಿಂದ ಹೈರಾಣರಾಗಿದ್ದಾರೆ. ಸಂಬಂಧಪಟ್ಟವರು ಅಕ್ರಮ ಕಸಾಯಿಖಾನೆಗಳನ್ನು ಪತ್ತೆ ಹಚ್ಚಿ ಅಕ್ರಮಗೋವಧೆ ತಡೆಯಬೇಕು ಎಂದು ಹಿಂದೂ ಸಂಘಟನೆಗಳ ಪ್ರಮುಖರು ಅಗ್ರಹಿಸುತ್ತಿದ್ದಾರೆ.