ನ್ಯೂಸ್ ನಾಟೌಟ್: ಸೊಂಟವನ್ನು ಹುಡುಗರು ಮಾತ್ರವಲ್ಲ ಇಳಿವಯಸ್ಸಿನವರೂ ಹೇಗೆ ಬೇಕೋ ಹಾಗೆ ತಿರುಗಿಸಬಹುದು ಅನ್ನುವುದನ್ನು ಇಲ್ಲೊಬ್ಬ ಅಜ್ಜಿ ತೋರಿಸಿಕೊಟ್ಟಿದ್ದಾರೆ. ಮಾತ್ರವಲ್ಲ ರಸ್ತೆಯಲ್ಲೇ ಯೋಗಾಸನ ಮಾಡಿ ಬಟರ್ಫ್ಲೈ ಫೋಸ್ ಕೊಟ್ಟು ಎಲ್ಲರ ಹೃದಯ ಗೆದ್ದಿದ್ದಾರೆ. ಅಜ್ಜಿಯ ವಿಡಿಯೋ ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದೆ. 72 ವರ್ಷದ ಅಜ್ಜಿಯ ಯೋಗಾಸನ ಕಂಡು ಜನ ಮೂಕವಿಸ್ಮಿತರಾಗಿದ್ದಾರೆ.
ಈ ಅಜ್ಜಿಯ ಹೆಸ್ರು ದ್ರಾಕ್ಷಾಯಿಣಿ ವಡಗೇರಿ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದವರು. ಯೋಗದಿಂದಲೇ ತನ್ನ ರೋಗ ದೂರ ಮಾಡಿಕೊಂಡ ದ್ರಾಕ್ಷಾಯಿಣಿ ಅಜ್ಜಿ ಕಳೆದ 7 ವರ್ಷದಿಂದ ನಿರಂತರ ಯೋಗದ ಮೊರೆ ಹೋಗಿದ್ದಾರೆ. 72ರ ಇಳಿ ವಯಸ್ಸಿನಲ್ಲಿ ನಿತ್ಯ ತಪ್ಪದೇ ಯೋಗ ಮಾಡುತ್ತಾರೆ. ಈ ಅಜ್ಜಿ ಯೋಗ ಮಾಡೋದು ನೋಡಿದ್ರೆ ಎಂತವರು ಕೂಡ ಹುಬ್ಬೇರಿಸುತ್ತಾರೆ. ದ್ರಾಕ್ಷಾಯಿಣಿಯವರು ಬಿಪಿ ಲೋ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ದ್ರಾಕ್ಷಾಯಿಣಿ ಬಡ ಮಹಿಳೆ.
ಈಕೆಗೆ ಆಸ್ಪತ್ರೆಗೆ ಹೋಗಿ ಖರ್ಚು ಮಾಡುವ ಶಕ್ತಿ ಇಲ್ಲದಾಗಿತ್ತು. ನಿತ್ಯ ವಾಕಿಂಗ್ ಮಾಡುತ್ತಾ ಯೋಗ ಆರಂಭಿಸಿದ ಅಜ್ಜಿ, ಯೋಗದ ವಿವಿಧ ಆಸನಗಳನ್ನು ರೂಢಿಸಿಕೊಂಡಿದ್ದಾರೆ. ಯೋಗ ಮಾಡಲು ಆರಂಭಿಸಿದ ಬಳಿಕ ಈಗ ಆರೋಗ್ಯ ಸಂಪೂರ್ಣ ಸುಧಾರಣೆ ಆಗಿದೆಯಂತೆ. ಇದನ್ನು ಸ್ವತಃ ಅಜ್ಜಿ ಹೇಳಿದ್ದಾರೆ. ದ್ರಾಕ್ಷಾಯಿಣಿ ವಡಗೇರಿ ನಿತ್ಯ ಬೆಳಗ್ಗೆ 5.30ಕ್ಕೆ ವಾಕಿಂಗ್ ಹೋಗುತ್ತಾರೆ. ರಸ್ತೆ ಬದಿಯಲ್ಲೇ ಒಂದು ಗಂಟೆಗಳ ಕಾಲ ಯೋಗಾಭ್ಯಾಸ ಮಾಡುತ್ತಾರೆ. ಪ್ರತಿ ದಿನ ಏನೇ ತಪ್ಪಿದರೂ ಯೋಗ ಮಾಡುವುದು ತಪ್ಪಿಸಲ್ಲ. ಯೋಗ ಆರಂಭ ಮಾಡಿದಾಗಿಂದ ಯಾವುದೇ ಕಾಯಿಲೆ ಇಲ್ಲದೇ ಆರೋಗ್ಯವಾಗಿದ್ದೇನೆ. ಬೆಳಗ್ಗೆ ವಾಕಿಂಗ್, ಯೋಗಾಭ್ಯಾಸದ ಬಳಿಕ ಅಡುಗೆ ಮಾಡಲು ರಸ್ತೆ ಬದಿಯಲ್ಲಿ ಸಿಗುವ ಕಟ್ಟಿಗೆ ಆಯ್ದುಕೊಂಡು ಹೋಗಿ ಜೀವನ ಸಾಗಿಸುತ್ತಿದ್ದಾರೆ.