ನ್ಯೂಸ್ ನಾಟೌಟ್ ಪುತ್ತೂರು: ಕ್ಷಯರೋಗಕ್ಕೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳು ರೋಗಿಗಳ ಮಾಹಿತಿಯನ್ನು ಕಡ್ಡಾಯವಾಗಿ ಆರೋಗ್ಯ ಇಲಾಖೆಗೆ ನೀಡಬೇಕು. ಇದನ್ನು ಉಲ್ಲಂಘಿಸಿದ ಖಾಸಗಿ ಆಸ್ಪತ್ರೆ ಅಥವಾ ಕ್ಲಿನಿಕ್ಗಳ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ಹೇಳಿದರು.
ಪುತ್ತೂರು ಪತ್ರಿಕಾಭವನದಲ್ಲಿ ಮಂಗಳವಾರ (ಜೂ.13) ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ ಆಯೋಜಿಸಿದ ಕ್ಷಯಮುಕ್ತ ಭಾರತ ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
2025ರೊಳಗೆ ದೇಶದಲ್ಲಿ ಕ್ಷಯರೋಗವನ್ನು ಸಂಪೂರ್ಣವಾಗಿ ತೊಲಗಿಸುವ ಗುರಿ ಇಡಲಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಆರೋಗ್ಯ ಇಲಾಖೆ ಹಲವು ರೀತಿಯ ಮಾಹಿತಿ ಕಾರ್ಯಾಗಾರಗಳ ಜತೆಗೆ ಕ್ಷಯರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಕಾರ್ಯವನ್ನೂ ಮಾಡುತ್ತಿದೆ ಎಂದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ 2022ರ ಲೆಕ್ಕಾಚಾರದ ಪ್ರಕಾರ 2954 ಕ್ಷಯರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯ ಇಲಾಖೆ ಕ್ಷಯರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆಯ ಜತೆಗೆ ಪೌಷ್ಟಿಕ ಆಹಾರವನ್ನೂ ಉಚಿತವಾಗಿ ವಿತರಿಸುತ್ತಿದೆ. ಅಲ್ಲದೇ ಕ್ಷಯರೋಗಿಗಳನ್ನು ನೋಡಿಕೊಳ್ಳಲು ವ್ಯಕ್ತಿಗೂ ಸರ್ಕಾರ ಆರ್ಥಿಕ ಸಹಾಯಧನ ನೀಡುವ ವ್ಯವಸ್ಥೆಯೂ ಆರೋಗ್ಯ ಇಲಾಖೆಯಲ್ಲಿದೆ ಎಂದರು.
ಶಿಬಿರವನ್ನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಉದ್ಘಾಟಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಮತ್ತಿತರರಿದ್ದರು.