ನ್ಯೂಸ್ ನಾಟೌಟ್: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ವರ್ಗಾವಣೆ ಪ್ರಕ್ರಿಯೆ ಜೋರಾಗಿದೆ. ಸೋಮವಾರವಷ್ಟೇ 14 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ ಮಂಗಳವಾರ ಒಂದೇ ದಿನ 75 ಕೆ.ಎ.ಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವಿವಿಧ ಸ್ಥಳಗಳಿಗೆ ಕೆಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದ್ದು, ಕೆಎಎಸ್ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಡಿಸುವುದಕ್ಕೂ ಕೆಲವೇ ಗಂಟೆಗಳ ಮುನ್ನ ಸರ್ಕಾರವು 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು ಎಂದು ಮೂಲಗಳು ತಿಳಿಸಿವೆ.
ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ತಮ್ಮ ವರ್ಗಾವಣೆಗೆ ತಡೆ ತಂದಿದ್ದರಿಂದ ಸರ್ಕಾರ ತಾತ್ಕಾಲಿಕವಾಗಿ ಯಾವುದೇ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡದಿರಲು ನಿರ್ಧರಿಸಿತ್ತು. ಇದೀಗ ಮತ್ತೆ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದೆ.
ಕಿಯೋನಿಕ್ಸ್ ಎಂಡಿ ಆಗಿದ್ದ ರವಿ ಡಿ. ಚನ್ನಣ್ಣನವರ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಡಿಐಜಿಪಿ ಆಗಿ ಎರಡು ವಾರಗಳ ಹಿಂದೆ ವರ್ಗಾವಣೆ ಮಾಡಲಾಗಿತ್ತು. ರಾಜ್ಯದ ಎಲ್ಲ ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ಸೋಮವಾರ ಸರ್ಕಾರ ಆದೇಶ ಹೊರಡಿಸಿತ್ತು ಎನ್ನಲಾಗಿದೆ.