ನ್ಯೂಸ್ ನಾಟೌಟ್: ಹಿಂದೂ ಯುವಕನ್ನು ನಾಯಿಯಂತೆ ಕಟ್ಟಿ ಹಾಕಿ ಬೊಗಳಲು ಒತ್ತಾಯಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಮುಸ್ಲಿಂ ಸಮುದಾಯದ ವ್ಯಕ್ತಿಗಳ ಮನೆಯನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಲಾಗಿದೆ.
ಮಧ್ಯಪ್ರದೇಶದ ಭೋಪಾಲ್ನಲ್ಲಿ ಹಿಂದೂ ಯುವಕನನ್ನು ಕಟ್ಟಿ ಹಾಕಿ ನಾಯಿಯಂತೆ ಬೊಗಳು ಎಂದು ಮೂವರು ಮುಸ್ಲಿಂ ಯುವಕರು ಒತ್ತಾಯಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಸಿಎಂ ಆದೇಶದಂತೆ ಬುಲ್ಡೋಜರ್ ಬಳಸಿ ಮೂವರ ಮನೆಯನ್ನು ನೆಲಸಮಗೊಳಿಸಲಾಗಿದೆ. ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್ಎಸ್ಎ) ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಹೇಳಿದ್ದಾರೆ.
ಆರೋಪಿಗಳು ಯುವಕನೊಬ್ಬನಿಗೆ ಹಿಂಸೆ ಕೊಟ್ಟಿದ್ದ ಅಮಾನವೀಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. 48 ಸೆಕೆಂಡ್ಗಳ ವಿಡಿಯೊದಲ್ಲಿ ವ್ಯಕ್ತಿ ಕೈಕಟ್ಟಿಕೊಂಡು ನಾಯಿಯಂತೆ ಕುಳಿತಿದ್ದು, ಕೆಲವರು ‘ನಾಯಿಯಂತೆ ಬೊಗಳು, ಕ್ಷಮೆಯಾಚಿಸು’ ಎಂದು ಆಜ್ಞೆ ಮಾಡುವ ದೃಶ್ಯವಿತ್ತು.
ಸಂತ್ರಸ್ತ ವ್ಯಕ್ತಿಯನ್ನು ವಿಜಯ್ ರಾಮ್ಚಾಂದನಿ ಎಂದು ಗುರುತಿಸಲಾಗಿದೆ.
‘ನನ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಿ ಥಳಿಸಿದರು’ ಎಂದು ವಿಜಯ್ ದೂರಿನಲ್ಲಿ ತಿಳಿಸಿದ್ದಾರೆ. ಮೂವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ಅವರ ಮನೆಗಳನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡುವಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆದೇಶಿಸಿದ್ದರೆ. ಎನ್ಎಸ್ಎ ಕಾಯ್ದೆಯಡಿಯಲ್ಲಿ ಆರೋಪಿಗಳನ್ನು 12 ತಿಂಗಳ ವರೆಗೆ, ಹೊಸ ಸಾಕ್ಷ್ಯಗಳು ದೊರೆತರೆ ಇನ್ನೂ ಹೆಚ್ಚಿನ ಅವಧಿವರೆಗೆ ಬಂಧಿಸಬಹುದಾಗಿದೆ.