ನ್ಯೂಸ್ ನಾಟೌಟ್ :ಕಳೆದ ವರ್ಷ ಕರ್ನಾಟಕದ ಶಾಲೆಗಳಲ್ಲಿ ಹಿಜಾಬ್ ಗೆ ಅವಕಾಶ ನೀಡಬಾರದು ಎನ್ನುವ ವಿವಾದ ಭಾರೀ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಭೋಪಾಲ್ ನ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿನಿಯರೂ ಹಿಜಾಬ್ ಧರಿಸಿದ ಫೋಟೋಗಳು ವೈರಲ್ ಆಗಿದೆ. ಈ ವಿಚಾರ ಇದೀಗ ವ್ಯಾಪಕ ಚರ್ಚೆಗೂ ಕಾರಣವಾಗಿದೆ.
ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಗಂಗಾ ಜಮ್ನಾ ಹೈಯರಿ ಸೆಕೆಂಡರಿ ಸ್ಕೂಲ್ ಚರ್ಚೆಗೆ ಗ್ರಾಸವಾಗಿರುವ ಶಾಲೆ. ಈ ಶಾಲೆಯ ಪೋಸ್ಟರ್ ನಲ್ಲಿ ಹಿಂದೂ ಹೆಣ್ಮಕ್ಕಳು ಕೂಡ ಹಿಜಾಬ್ ಧರಿಸಿರುವುದನ್ನು ಕಾಣಬಹುದಾಗಿದ್ದು, ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಮಾತ್ರವಲ್ಲ ವ್ಯಾಪಕ ಚರ್ಚೆಗೂ ಕಾರಣವಾಗಿದೆ.
ಈ ಬಗ್ಗೆ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ತನಿಖೆಗೆ ಆದೇಶಿಸಿದ್ದಾರೆ. ಇತ್ತೀಚೆಗೆ ಶಾಲೆಯ ಫಲಿತಾಂಶ ಕುರಿತು ಹಾಕಲಾದ ಬ್ಯಾನರ್ ನಲ್ಲಿಯೂ ಹಲವು ಹಿಂದೂ ವಿದ್ಯಾರ್ಥಿನಿಯರು ತಲೆಗೆ ಹಿಜಾಬ್ ರೀತಿಯ ವಸ್ತ್ರ ಧರಿಸಿದ್ದು ಕಂಡು ಬಂದಿದೆ. ಮೊದಲಿಗೆ ಈ ಆರೋಪದ ಕುರಿತು ತನಿಖೆ ನಡೆಸಿದ್ದ ಜಿಲ್ಲಾ ಶಿಕ್ಷಣಾಧಿಕಾರಿಗಳು ಈ ಕುರಿತು ಯಾವುದೇ ದೂರು ಬಂದಿಲ್ಲವೆಂದು ವರದಿ ನೀಡಿದ್ದರು.
ಈ ನಡುವೆ ಶಾಲೆಯ ಮಾಲೀಕ ಮುಶ್ತಾಖ್ ಖಾನ್ ಪ್ರತಿಕ್ರಿಯೆ ನೀಡಿ, ಹಿಜಾಬ್ ರೀತಿಯ ಶಿರವಸ್ತ್ರ ಕೂಡಾ ಶಾಲೆಯ ಸಮವಸ್ತ್ರದ ಭಾಗವಾಗಿದೆ. ಈ ಬಗ್ಗೆ ನಾವು ಯಾರ ಮೇಲೂ ಒತ್ತಡ ಹೇರಿಲ್ಲ ಎಂದಿದ್ದಾರೆ. ಇತ್ತ ಕರ್ನಾಟಕದಲ್ಲಿ ಕಳೆದ ಬಾರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಬ್ಯಾನ್ ಮಾಡಿತ್ತು. ಸದ್ಯ ಈ ವಿಚಾರ ಕೋರ್ಟ್ ನಲ್ಲಿದೆ.