ನ್ಯೂಸ್ ನಾಟೌಟ್: ಬೆಂಗಳೂರಿನಲ್ಲಿ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಚಾರಿ ಮಹಿಳಾ ಪೊಲೀಸ್ ಪ್ರಿಯಾಂಕಾ ಹೃದಯಾಘಾತದಿಂದ ಭಾನುವಾರ ಮೃತಪಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಇವರ ಜೀವನದ ಕಥೆ ಕರುಣಾಜನಕವಾಗಿದೆ.
ಭಾನುವಾರ ಎಂದಿನಿಂತೆ ಕೆಲಸ ಮುಗಿಸಿಕೊಂಡು ಮನೆಗೆ ಹೋದ ಪ್ರಿಯಾಂಕಾಗೆ ರಾತ್ರಿ 11.30ರ ಸುಮಾರಿಗೆ ಹೃದಯಾಘಾತ ಸಂಭವಿಸಿದೆ. ಈ ವೇಳೆ ಆಸ್ಪತ್ರೆಗೂ ಹೋಗಲಾಗದೆ ಹಾಸಿಗೆಯಲ್ಲಿಯೇ ನರಳಾಡಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ ಪೊಲೀಸ್ ಇಲಾಖೆಗೆ ಕೆಲವು ವರ್ಷಗಳ ಹಿಂದೆ ಸೇರ್ಪಡೆಯಾಗಿದ್ದ ಪ್ರಿಯಾಂಕಾ 2018ರಲ್ಲಿ ಮದುವೆಯಾಗಿದ್ದಳು. ಆದರೆ, ದುರಾದೃಷ್ಟ ಎಂಬಂತೆ ಜಗತ್ತನ್ನೇ ಕಾಡಿದ ಕೋವಿಡ್ ಮಹಾಮಾರಿಗೆ ಪ್ರಿಯಾಂಕಾ ಅವರ ಪತಿ 2021ರಲ್ಲಿ ಸಾವನ್ನಪ್ಪಿದ್ದರು. ಇದರಲ್ಲಿಯೂ ಒಂದು ಮನಕಲಕುವ ವಿಚಾರವೆಂದರೆ ಆಗ ಇವರು ಗರ್ಭಿಣಿಯಾಗಿದ್ದರು. ಇನ್ನು ಕೋವಿಡ್ನಿಂದ ಗಂಡನನ್ನು ಕಳೆದುಕೊಂಡರೂ ದೃತಿಗೆಡದೇ ತನ್ನ ಸಂಚಾರಿ ಪೊಲೀಸ್ ಕರ್ತವ್ಯವನ್ನು ಮುಂದುವರಿಸಿಕೊಂಡು ಮಗುವಿಗೆ ಜನ್ಮ ನೀಡಿದ್ದರು. ಇನ್ನು ಹುಟ್ಟುತ್ತಲೇ ತಂದೆ ಇಲ್ಲದೇ ಜನಿಸಿದ್ದ ಮಗು, ಈಗ ಒಂದು ವರ್ಷದಲ್ಲೇ ಜನ್ಮ ನೀಡಿದ ತಾಯಿಯನ್ನೂ ಕಳೆದುಕೊಂಡು ಅನಾಥವಾಗಿದೆ.
ಬೆಂಗಳೂರು ಸಂಚಾರ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಸೇವ್ ಲೈಫ್ ಫೌಂಡೇಶನ್ ವತಿಯಿಂದ ಹಾಗೂ ಟಿಟಿಆರ್ಎಸ್ಐ ಸಹಯೋಗದೊಂದಿಗೆ, ಅಪಘಾತ ಸಂದರ್ಭದಲ್ಲಿ ತುರ್ತು ಚಿಕಿತ್ಸಾ ವಿಷಯಗಳ ಬಗ್ಗೆ ಜೂ.12ರಿಂದ ಜೂ.17ರವರೆಗೆ ಟಿಟಿಆರ್ ಎಸ್ಐನಲ್ಲಿ ತರಬೇತಿ ನೀಡಲಾಯಿತು. ಆದರೆ, ಇದಾದ ಎರಡೇ ದಿನಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಪೊಲೀಸ್ ವಿಭಾಗದ ಮಹಿಳಾ ಸಿಬ್ಬಂದಿ ಹೃದಯಾಘಾತದಿಂದಲೇ ಸಾವನ್ನಪ್ಪಿದ್ದಾರೆ.