ನ್ಯೂಸ್ ನಾಟೌಟ್: ಮಾಜಿ ಪ್ರಧಾನಿ ದೇವೇಗೌಡ ಕನ್ನಡಿಗರ ಹೆಮ್ಮೆ. ಅವರಿಗೀಗ 91ರ ಇಳಿ ವಯಸ್ಸು, ಈ ವಯಸ್ಸಿನಲ್ಲೂ ಅವರಲ್ಲಿರುವ ಉತ್ಸಾಹ ಬತ್ತಿಲ್ಲ ಅನ್ನುವುದು ವಿಶೇಷ. ದೇವೇಗೌಡರು ಇತ್ತೀಚಿಗೆ ಶಾರೀರಿಕವಾಗಿ ಕೊಂಚ ತಗ್ಗಿದಂತೆ ಕಂಡರೂ ಮಾನಸಿಕವಾಗಿ ಕಲ್ಲುಬಂಡೆಯಷ್ಟೇ ಸದೃಢರಾಗಿದ್ದಾರೆ.
ಇದೀಗ ದೇವೇಗೌಡರ ಆರೋಗ್ಯದ ಗುಟ್ಟು ಬಯಲಾಗಿದೆ. ನನ್ನ ಆರೋಗ್ಯ ಇಷ್ಟರ ಮಟ್ಟಿಗೆ ಚೆನ್ನಾಗಿರಲು ಯೋಗವೇ ಕಾರಣ ಎಂದು ಸ್ವತಃ ದೇವೇಗೌಡರೇ ಹೇಳಿಕೊಂಡಿದ್ದಾರೆ.
ಇಂದು 9ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ (9th International Yoga Day) ಸಂದರ್ಭದಲ್ಲಿ ನಾಡಿನ ಜನತೆಗೆ ಅವರು ಟ್ವಿಟ್ಟರ್ ಮೂಲಕ ವಿಶೇಷ ಸಂದೇಶ ನೀಡಿದ್ದಾರೆ.
ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ನಾನು 91ನೇ ವಯಸ್ಸಿನಲ್ಲಿದ್ದೇನೆ. ನಾನಿನ್ನೂ ಈ ಮಟ್ಟದಲ್ಲಿ ಉಳಿದುಕೊಳ್ಳಲು ನಿರಂತರ ಯೋಗ ಅಭ್ಯಾಸ ನನಗೆ ಸಹಾಯ ಮಾಡಿದೆ. ಎಲ್ಲರೂ ಯೋಗ ಮಾಡಿ, ಮಾನಸಿಕ ಮತ್ತು ದೈಹಿಕ ಫಿಟ್ನೆಸ್, ಕ್ಷೇಮ ಕಾಪಾಡಿಕೊಳ್ಳಿ ಎಂದು ಹೇಳಿದ್ದಾರೆ.