ನ್ಯೂಸ್ ನಾಟೌಟ್ : ಸಿಎಂ. ಸಿದ್ದು ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಮನೆ ಯಜಮಾನಿಗೆ 2೦೦೦ ರೂ ನೀಡುವ ‘ಗೃಹಲಕ್ಷ್ಮೀ’ ಯೋಜನೆಗೆ ಅರ್ಜಿ ಸಲ್ಲಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ. ನಾಳೆಯಿಂದಲೇ(ಜೂನ್ 16) ಈ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವೆ, ನಾಳೆಯಿಂದಲೇ ಗೃಹಲಕ್ಷ್ಮೀ ಯೋಜನೆಗೆ ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಪಡಿಸಿಲ್ಲ. ವರ್ಷ ಪೂರ್ತಿ ಈ ಪ್ರಕ್ರಿಯೆ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಬಿಪಿಎಲ್, ಅಂತ್ಯೋದಯ ಕಾರ್ಡ್ದಾರರು ಗೃಹಲಕ್ಷ್ಮೀ ಯೋಜನೆಗೆ ನಾಳೆಯಿಂದ ಅರ್ಜಿ ಸಲ್ಲಿಸಬಹುದು. ಸೇವಾಸಿಂಧು ಪೋರ್ಟಲ್, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಮಹಿಳೆ ಆಧಾರ್ ಕಾರ್ಡ್, ಪತಿ ಆಧಾರ್ ಕಾರ್ಡ್ ಮಾಹಿತಿ ನೀಡಬೇಕು. ಈ ಬಗ್ಗೆ ಯಾವುದೇ ಗೊಂದಲಗಳಿದ್ದರೆ ಸಹಾಯವಾಣಿ ಸಂಖ್ಯೆ 1902ಕ್ಕೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು. ಅಲ್ಲದೇ ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ. ಅರ್ಜಿ ಸಲ್ಲಿಸಲು ಪ್ರಕ್ರಿಯೆ ವರ್ಷ ಪೂರ್ತಿ ನಿರಂತರವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು. ನಾಳೆ ಬೆಂಗಳೂರಿನ ಶಕ್ತಿ ಭವನದಲ್ಲಿ ಸಿದ್ದರಾಮಯ್ಯನವರಿಂದ ಸೇವಾ ಸಿಂಧು ವೆಬ್ ಲಾಂಚ್ ಆಗಲಿದ್ದು, ನಾಳೆ ಮಧ್ಯಾಹ್ನ 1.30ರಿಂದ ಅರ್ಜಿ ಸಲ್ಲಿಕೆ ಮಾಡಬಹುದು. ‘ಗೃಹಲಕ್ಷ್ಮೀ’ಯೋಜನೆಗೆ ವಾರ್ಷಿಕ ಅಂದಾಜು 30 ಸಾವಿರ ಕೋಟಿ ವೆಚ್ಚ ನಿರೀಕ್ಷೆ ಇದ್ದು, ಆಗಸ್ಟ್ 18ರಂದು ಬೆಳಗಾವಿ ಅಥವಾ ಹುಬ್ಬಳ್ಳಿಯಲ್ಲಿ ‘ಗೃಹಲಕ್ಷ್ಮೀ’ಗೆ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
- ಅರ್ಜಿದಾರರು 16-06-2023 ರಿಂದ ಅರ್ಜಿ ಸಲ್ಲಿಸಬಹುದು
- ಅರ್ಜಿ ಸಲ್ಲಿಸಲು ಅರ್ಜಿದಾರರ ಹಾಗೂ ಪತಿಯ ಆಧಾರ್ ಕಾರ್ಡ್ ಸಂಖ್ಯೆ ಮೊಬೈಲ್ ಸಂಖ್ಯೆ ಹಾಗೂ ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು ಇರಬೇಕು
- ಅರ್ಜಿ ಸಲ್ಲಿಕೆಗೆ ಯಾವುದೇ ಕೊನೆಯ ದಿನಾಂಕವಿಲ್ಲ. ಯೋಜನೆಯ ಕುರಿತಂತೆ ಸಂದೇಹ/ ಕುಂದುಕೊರತೆಗಳಿದ್ದಲ್ಲಿ ಸಹಾಯವಾಣಿ (Helpline) – 1902 ಗೆ ಸಂಪರ್ಕಿಸಿ
- ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿಲ್ಲ. ಅರ್ಜಿದಾರರು ಮಧ್ಯವರ್ತಿಗಳ ಮೇಲೆ ಅವಲಂಬಿತರಾಗದೆ ಅರ್ಜಿಯನ್ನು ಸ್ವತಃ ಮೇಲೆ ತಿಳಿಸಿದ ಕೇಂದ್ರಗಳಲ್ಲಿ ಸಲ್ಲಿಸಬಹುದು
- ಅರ್ಜಿ ಸಲ್ಲಿಕೆಗೆ SMS ಮೂಲಕ ಹಾಗೂ ಸೇವಾಸಿಂಧು ಪೋರ್ಟಲ್ ಮೂಲಕ Auto generated ಸ್ವೀಕೃತಿಗಳನ್ನು ಪಡೆಯಬಹುದಾಗಿದೆ.
- ಅರ್ಜಿಗಳನ್ನು ಆನ್ಲೈನ್ ಮೂಲಕ ಅಥವಾ ಭೌತಿಕವಾಗಿ ಗ್ರಾಮ ಒನ್/ಬೆಂಗಳೂರು ಒನ್/ಕರ್ನಾಟಕ ಒನ್ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಸಲ್ಲಿಸಬಹುದಾಗಿದೆ (https://sevasindhugs.karnataka.gov.in/gruhalakshmi)