ನ್ಯೂಸ್ ನಾಟೌಟ್: ಭಾರತದ ಕುಟುಂಬವೊಂದು ತಮ್ಮ 27 ತಿಂಗಳ ಮಗುವಿಗಾಗಿ ಹೋರಾಟ ಆರಂಭಿಸಿದೆ. ಜಮರ್ನಿಯ ಕೋರ್ಟ್ವೊಂದು ಮಗುವನ್ನು ಪೋಷಕರ ಸುಪರ್ದಿಗೆ ನೀಡಲು ನಿರಾಕರಿಸಿರುವುದೇ ಇವರ ಹೋರಾಟಕ್ಕೆ ಪ್ರಮುಖ ಕಾರಣವಾಗಿದೆ.
ಬರ್ಲಿನ್ನ ಪಾಂಕೋವ್ನಲ್ಲಿರುವ ಕೋರ್ಟ್ 27 ತಿಂಗಳ ಅರಿಹಾ ಶಾ ಎಂಬ ಮಗುವನ್ನು ಪೋಷಕರ ಸುಪರ್ದಿಗೆ ನೀಡಲು ನಿರಾಕರಿಸಿ ಜರ್ಮನಿಯ ಯುವ ಕಲ್ಯಾಣ ಕಚೇರಿಗೆ ಹಸ್ತಾಂತರಿಸಿದೆ. 2021ರ ಸೆಪ್ಟೆಂಬರ್ನಿಂದಲೂ ಈ ಮಗು ಯುವ ಕಲ್ಯಾಣ ಕಚೇರಿ ವಶದಲ್ಲೇ ಇದೆ.
ಕಳೆದ ಶುಕ್ರವಾರ (ಜೂನ್ 16) ಇದೇ ವಿಚಾರವಾಗಿ ಅರ್ಜಿಯ ವಿಚಾರಣೆ ನಡೆಸಿರುವ ಪಾಂಕೋವ್ ಕೋರ್ಟ್ ಮಗುವಿನ ದೇಹದಲ್ಲಿ ಆಗಿರುವ ಗಾಯಗಳು ಆಕಸ್ಮಿಕ ಎಂಬ ಪೋಷಕರ ಹೇಳಿಕೆಯನ್ನು ವಜಾಗೊಳಿಸಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇದೀಗ ಪುಟ್ಟ ಮಗುವಿನ ಪೋಷಕರು ಭಾರತ ಸರ್ಕಾರದ ಮೋರೆ ಹೋಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರು ತಮ್ಮ ಮಗುವನ್ನು ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಎರಡು ವರ್ಷದ ಪುಟ್ಟ ಮಗುವನ್ನು ನಮ್ಮ ಸುಪರ್ದಿಗೆ ನೀಡಬೇಕು ಎಂದು ಮೊದಲು ಪೋಷಕರು ಕೋರ್ಟ್ಗೆ ಮನವಿ ಮಾಡಿದ್ದಾರೆ. ಆ ನಂತರ ಭಾರತದ ವೆಲ್ಫೇರ್ ಸಂಸ್ಥೆಗೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಪೋಷಕರು ಮತ್ತು ಭಾರತೀಯ ವೆಲ್ಫೇರ್ ಸೇವೆಗಳ ಸಂಸ್ಥೆಗಳು ಎರಡನ್ನೂ ಜರ್ಮನಿಯ ಈ ಕೋರ್ಟ್ ನಿರಾಕರಿಸಿದೆ.
ಅರಿಹಾ ಶಾ ದೇಹದಲ್ಲಿ ಎರಡು ಗಾಯದ ಗುರುತುಗಳು ಇವೆ. 2021ರ ಏಪ್ರಿಲ್ನಲ್ಲಿ ಮಗು ಸ್ನಾನ ಮಾಡುವಾಗ ತಲೆ ಮತ್ತು ಬೆನ್ನಿಗೆ ಗಾಯವಾಗಿದೆ. ಆನಂತರ ಅಂದರೆ 2021ರ ಸೆಪ್ಟೆಂಬರ್ನಲ್ಲಿ ಜನನಾಂಗದಲ್ಲಿ ಗಾಯವಾಗಿದೆ ಎಂದು ವರದಿ ಹೇಳಿದೆ.
ಮಗು ಅಪಾಯದಲ್ಲಿ ಇರುವ ಸಾಧ್ಯತೆ ಇದ್ದು, ಇದನ್ನು ತಪ್ಪಿಸಲು ಪೋಷಕರ ಆರೈಕೆಯನ್ನು ನಿರಾಕರಿಸಲಾಗಿದೆ ಎಂದು ಕೋರ್ಟ್ ಹೇಳಿದೆ ಎಂದು ವರದಿಯಾಗಿದೆ. ಮಗುವಿನ ತಾಯಿ ಅಥವಾ ತಂದೆ ಉದ್ದೇಶಪೂರ್ವಕವಾಗಿ ಮಗುವಿನ ಜನನಾಂಗದ ಗಾಯಗಳಿಗೆ ಕಾರಣರಾಗಿದ್ದಾರೆ ಎಂದು ವಿಚಾರಣೆ ವೇಳೆ ಕೋರ್ಟ್ ತಿಳಿಸಿದೆ.