ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಯಾದ ಫಾಜಿಲ್, ಜಲೀಲ್, ಮಸೂದ್ ಕುಟುಂಬಗಳಿಗೆ ಸರಕಾರದಿಂದ ಶೀಘ್ರ ಪರಿಹಾರ ನೀಡುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಎರಡು ದಿನ ಮಂಗಳೂರು, ಉಡುಪಿ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ ಮಂಗಳೂರಿಗೆ ಆಗಮಿಸಿದ ಅವರು ದಕ್ಷಿಣ ಕನ್ನಡದಲ್ಲಿ ನಡೆದಿದ್ದ ದೀಪಕ್ ರಾವ್, ಫಾಜೀಲ್, ಜಲೀಲ್, ಮಸೂದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗುವುದು ಮತ್ತು ಪರಿಹಾರ ನೀಡಲು ಬೇಕಾದ ವರದಿ ನೀಡಲು ಸೂಚಿಸಿದ್ದೇನೆ ಎಂದರು.
ಆದಷ್ಟು ಶೀಘ್ರದಲ್ಲಿ ಸರ್ಕಾರ ಈ ಕುಟುಂಬಗಳಿಗೆ ಪರಿಹಾರ ನೀಡಲಿದೆ. ಈ ವೇಳೆ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಡ್ರಗ್ಸ್ ಮಾಫಿಯಾ ತಡೆಯಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು. ಅಗಸ್ಟ್ 15 ರೊಳಗೆ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳುಯವುದಾಗಿ ಭರವಸೆ ನೀಡಿದರು. ಅಶಾಂತಿ ಸೃಷ್ಠಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ, ಇಲ್ಲಿನ ವಿದ್ಯಾರ್ಥಿಗಳು ಯುವಕರು ನಮ್ಮ ಜೊತೆ ಕೈ ಜೋಡಿಸಿ ಮಂಗಳೂರಿನಲ್ಲಿ ಶಾಂತಿ-ಸಾಮರಸ್ಯವನ್ನು ಕಟ್ಟಲು ಸಹಕರಿಸಿ ಎಂದು ಮಂಗಳೂರಿನಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ದಕ್ಷಿಣ ಕನ್ನಡದಲ್ಲಿ ದೀಪಕ್ ರಾವ್,ಫಾಜೀಲ್, ಜಲೀಲ್, ಮಸೂದ್ ಹತ್ಯೆ ಪ್ರಕರಣದ ಮರುತನಿಖೆಗೆ ಆದೇಶ ನೀಡಬೇಕು ಮತ್ತು ಎಲ್ಲಾ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಹಲವು ಸಂಘಟನೆಗಳ ಮೂಲಕ ಒತ್ತಾಯಿಸಲಾಗಿತ್ತು.