ನ್ಯೂಸ್ ನಾಟೌಟ್: ‘ಗ್ಯಾರಂಟಿ’ ಸೌಲಭ್ಯಕ್ಕೆ ನನ್ನ ಹೆಂಡ್ತಿ, ತಾಯಿ ಬೇಕಿದ್ದರೂ ಅರ್ಜಿ ಹಾಕಿಕೊಳ್ಳಲಿ, ಸಂಸಾರ ನಡೆಸುವವರು ಅವರು. ನನ್ನ ತಕರಾರಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(dk shivakumar) ತಿಳಿಸಿದ್ದಾರೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಯಾರ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳುವುದಿಲ್ಲ. ಅರ್ಜಿ ಹಾಕುವುದು ಅವರಿಗೆ ಬಿಟ್ಟ ವಿಚಾರ, ‘ಸಲೀಂ ಅಹಮದ್, ರಾಮಲಿಂಗಾರೆಡ್ಡಿ ಅವರು ತಮ್ಮ ಮನೆಯವರಿಗೆ ‘ಶಕ್ತಿ’ ಯೋಜನೆ ಸೌಲಭ್ಯ ಬೇಡ ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಪತ್ನಿಗೂ ಬಸ್ನಲ್ಲಿ ಫ್ರೀ ಎಂದಿದ್ದಾರೆ. ಬೇಕಿದ್ದರೆ ರಾಣಿ ಸತೀಶ್ ಅವರು ಬಸ್ನಲ್ಲಿ ಉಚಿತವಾಗಿ ಓಡಾಟ ನಡೆಸಬಹುದು’ ಎಂದರು.
‘ಗೃಹ ಲಕ್ಷ್ಮಿ ಯೋಜನೆಗೆ ಆ್ಯಪ್ನಲ್ಲಿ ದಾಖಲೆ ಅಪ್ಲೋಡ್ ಮಾಡಲು ಪಕ್ಷದ ಕಾರ್ಯಕರ್ತರೇ ಮನೆ ಬಾಗಿಲಿಗೆ ಬಂದು ನೆರವು ನೀಡಲಿದ್ದಾರೆ. ಗ್ಯಾರಂಟಿ ಸೌಲಭ್ಯ ನೀಡಲು ಅಧಿಕಾರಿಗಳು ಲಂಚ ಪಡೆದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಸಿದರು. ‘ಶಕ್ತಿ ಯೋಜನೆಯಿಂದ ರಾಜ್ಯದ ಮಹಿಳೆಯರು ತೀರ್ಥಯಾತ್ರೆ ಮಾಡುತ್ತಿದ್ದಾರೆ. ಧರ್ಮ ರಕ್ಷಿಸುತ್ತಿದ್ದಾರೆ. ಎರಡು ದಿನದಲ್ಲಿ ಮಹಿಳೆಯರಿಗೆ ಪಾಸ್ ಸಹ ವಿತರಣೆ ಮಾಡಲಾಗುವುದು’ ಎಂದರು.‘ಗೃಹ ಜ್ಯೋತಿ ಯೋಜನೆ ನೋಂದಣಿಗೆ ನೂಕುನುಗ್ಗಲು ಉಂಟಾಗುತ್ತಿದ್ದು ಸರ್ವರ್ ಸಮಸ್ಯೆ ಎದುರಾಗಿದೆ. ಇದನ್ನು ತಪ್ಪಿಸಲು ಗೃಹ ಲಕ್ಷ್ಮಿಗೆ ಪ್ರತ್ಯೇಕ ಆ್ಯಪ್ ಸಿದ್ಧ ಪಡಿಸಲಾಗುತ್ತಿದೆ. ಎರಡು ದಿನದಲ್ಲಿ ಸಿದ್ಧವಾಗಲಿದೆ’ ಎಂದು ಹೇಳಿದರು.