ನ್ಯೂಸ್ ನಾಟೌಟ್: ವರದಕ್ಷಿಣೆ ಪಡೆಯುವುದೇ ಕಾನೂನು ಪ್ರಕಾರ ಅಪರಾಧ. ಆದರೆ ಇದು ವರದಕ್ಷಿಣೆಯಲ್ಲ ಬದಲಿಗೆ ಇದು ವಧುದಕ್ಷಿಣೆ, ವಧುದಕ್ಷಿಣೆ ಪಡೆದು ನಂತರ ವಧು ನೀಡದೆ ವರನಿಗೆ ವಂಚಿಸಿದ ಆರೋಪ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ವರದಿಯಾಗಿದೆ, ಯುವತಿ ಮತ್ತು ಆಕೆಯ ಕುಟುಂಬಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
2021 ಮಾರ್ಚ್ ತಿಂಗಳಲ್ಲಿ ಜಿಗಣಿಯ ನಾರಾಯಣ ನಾಯಕ್ ಎಂಬುವರ ಜೊತೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಯುವತಿಯ ಮದುವೆ ಮಾತುಕತೆ ನಡೆದಿತ್ತು. ಅಂದು ನಮ್ಮ ಬಳಿ ಹಣ ಇಲ್ಲ ಹೀಗಾಗಿ 2 ವರ್ಷದ ನಂತರ ಮದುವೆ ಮಾಡುವುದಾಗಿ ಮದುವೆಗೆ ವಿಳಂಬ ಮಾಡಿದ್ದರು. ಇದೇ ವೇಳೆ ವಧುದಕ್ಷಿಣೆಯಾಗಿ 2 ಲಕ್ಷ ರೂ. ಕೇಳಲಾಗಿತ್ತು ಎಂದು ಆರೋಪಿಸಲಾಗಿದೆ.
ಎರಡು ವರ್ಷ ಕಳೆದರೂ ಮದುವೆ ತೆಗೆಯುವ ಏರ್ಪಾಟಿನಲ್ಲಿ ಇಲ್ಲದ ಹಿನ್ನೆಲೆ ವಿಚಾರಿಸಿದಾಗ ಮದುವೆ ಬೇಡ ಎಂಬ ನಿಲುವಿಗೆ ಯುವತಿ ಮತ್ತು ಆಕೆಯ ಕುಟುಂಬಸ್ಥರು ಬಂದಿದ್ದಾರೆ ಎನ್ನಲಾಗಿದೆ. ಸದ್ಯ ನಾವು ಕೊಟ್ಟ ವಧುದಕ್ಷಿಣೆ ವಾಪಸ್ ನೀಡುವಂತೆ ಜಿಗಣಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅದರಂತೆ ವಧುವಿನ ಸಂಬಂಧಿಕರಾದ ಲಕ್ಕಪತಿ ರವಿ ವಿರುದ್ಧ ದೂರು ದಾಖಲಾಗಿದೆ.
ಇತ್ತ ವಧುವಿನ ಕಡೆಯಿಂದಲೂ ಸ್ಪಷ್ಟನೆ ನೀಡಲಾಗಿದ್ದು, ನಾರಾಯಣ ನಾಯಕ್ ಸುಳ್ಳು ಹೇಳಿ ಮದುವೆ ಆಗಲು ಮುಂದಾಗಿದ್ದರು. ಊರಲ್ಲಿ ಬಹಳಷ್ಟು ಆಸ್ತಿಪಾಸ್ತಿ ಇದೆ ಅಂತ ಹೇಳಿದ್ದರು. ಆದರೆ ನಾವು ಊರಿಗೆ ಭೇಟಿ ನೀಡಿದಾಗ ಅಂಥಾದ್ದೇನು ಇರಲಿಲ್ಲ. ತಂದೆ ತಾಯಿ ಮಗಳ ಭವಿಷ್ಯ ನೋಡಿ ಮದುವೆ ಬೇಡ ಅಂದಿದ್ದಾರೆ ಎಂದು ವಧುವಿನ ಅಕ್ಕ ಹಾಗೂ ಸಂಬಂಧಿಕರು ಹೇಳಿದ್ದಾರೆ. ಸದ್ಯ ಮದುವೆ ಬೇಡವೆಂದಿದ್ದರೆ ವಧುದಕ್ಷಿಣೆ ಯಾಕೆ ಪಡೆಯಬೇಕಿತ್ತು ಅಂತ ಪ್ರಶ್ನೆ ಎದ್ದಿದ್ದು, ಜಿಗಣಿ ಪೊಲೀಸರು ವರನ ಕಡೆಯಿಂದ ದೂರು ಸ್ವೀಕರಿಸಿದ್ದಾರೆ ಎನ್ನಲಾಗಿದೆ.