ನ್ಯೂಸ್ ನಾಟೌಟ್: ಅಂಗನವಾಡಿ ಮಕ್ಕಳಿಗೆ ಪೌಷ್ಠಿಕ ಆಹಾರದ ಕೊರತೆ ಆಗಬಾರದು ಎನ್ನುವ ಕಾರಣಕ್ಕೆ ಸರ್ಕಾರದಿಂದ ಮೊಟ್ಟೆಯನ್ನು ಕೊಡಲಾಗುತ್ತದೆ. ಹೀಗೆ ಕೊಟ್ಟ ಮೊಟ್ಟೆಯೊಳಗೆ ಹೆಪ್ಪುಗಟ್ಟಿದ ರಕ್ತ ಹಾಗೂ ಇನ್ನೂ ಹೊರಬರಬೇಕಿದ್ದ ಮರಿ ಬೆಂದು ಹೋದ ವಿಚಿತ್ರ ಘಟನೆ ಬೆಳ್ತಂಗಡಿಯ ರೆಖ್ಯ ಎಂಬಲ್ಲಿ ನಡೆದಿದೆ.
ಒಂದೆರಡು ದಿನಗಳ ಹಿಂದೆ ರೆಖ್ಯ ಗ್ರಾಮದ ಎಂಜಿರ-ಕಟ್ಟೆ ಅಂಗನವಾಡಿ ಕೇಂದ್ರದಿಂದ ವಿತರಣೆಯಾಗಿದ್ದ ಮೊಟ್ಟೆಯನ್ನು ಮಗುವಿನ ಮನೆಯವರು ಪಡೆದುಕೊಂಡಿದ್ದರು. ಹಾಗೆ ಮನೆಗೆ ತಂದು ಮೊಟ್ಟೆಯನ್ನು ಬೇಯಿಸಿದಾಗ ಮೊಟ್ಟೆಯೊಳಗಿದ್ದ ಹೆಪ್ಪು ಗಟ್ಟಿದ ರಕ್ತ ಅದಾಗಲೇ ಹೊರಬರಬೇಕಿದ್ದ ಮರಿ ಎಲ್ಲವೂ ಬೆಂದು ಹೋಗಿತ್ತು. ಇದನ್ನು ನೋಡಿ ಮನೆಯವರು ಕೂಡ ಒಂದು ಕ್ಷಣ ಗಾಬರಿಯಾಗಿದ್ದಾರೆ. ಸರ್ಕಾರದಿಂದ ಸಿಗಬೇಕಿದ್ದ ಗುಣಮಟ್ಟದ ಮೊಟ್ಟೆಯಲ್ಲಿ ಇದೆಂತಹ ಕಳಪೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸದ್ಯ ಈ ಸುದ್ದಿ ಇಡೀ ಗ್ರಾಮದಲ್ಲಿ ಹರಡಿದೆ. ಈ ಬಾರಿ ಮೊಟ್ಟೆ ಪಡೆದುಕೊಂಡಿದ್ದ ಪ್ರತೀ ಮನೆಯಲ್ಲೂ ಗುಣಮಟ್ಟ, ಸಂಬಂಧಪಟ್ಟವರ ನಿರ್ಲಕ್ಷ್ಯಕ್ಕೆ ಆಕ್ರೋಶ ಹೊರಬಿತ್ತು. ಸದ್ಯ ಈ ವಿಚಾರ ವಾರ್ಡ್ ಸಭೆಯಲ್ಲಿ ಪ್ರಸ್ತಾಪವಾಗಿದೆ. ಮುಂದಿನ ಗ್ರಾಮಸಭೆಯಲ್ಲೂ ಚರ್ಚೆಗೆ ಬರಲಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರು ಹೇಳಿದ್ದಾರೆ. ಮೊಟ್ಟೆಯೊಳಗೆ ಬೆಂದು ಹೋದ ಮರಿಯ ಫೋಟೋ ಸಹಿತ ಫೋಟೋಗಳು ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದೆ.