ನ್ಯೂಸ್ ನಾಟೌಟ್: ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್ಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಅನ್ನುವ ಚರ್ಚೆ ಜೋರಾಗಿರುವ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಮತ್ತೆ ಮುಂದುವರಿಯುವ ಸಾಧ್ಯತೆಗಳಿವೆ ಅನ್ನುವ ಮುನ್ಸೂಚನೆಯನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ನೀಡಿದ್ದಾರೆ ಎನ್ನಲಾಗುತ್ತಿದೆ.
ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಚುನಾವಣಾ ಸಮಿತಿ ಸದಸ್ಯರ ಸಭೆಯಲ್ಲಿ ಬಿಎಲ್ ಸಂತೋಷ್ ಭಾಗಿಯಾಗಿದ್ದಾರೆ. ಈ ವೇಳೆ ಭಾರಿ ಚರ್ಚೆಗಳು ನಡೆದಿವೆ ಎನ್ನಲಾಗುತ್ತಿದ್ದು ಆ ಸಭೆಯಲ್ಲಿ ನಳಿನ್ ಕುಮಾರ್ ಪರ ಬಿಎಲ್ ಸಂತೋಷ್ ಬ್ಯಾಟಿಂಗ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಮಾತನಾಡಿರುವ ಬಿಎಲ್ ಸಂತೋಷ್, ಕೆಲವು ಮಾಧ್ಯಮಗಳಲ್ಲಿ ಸಂಸದರ ಬದಲಾವಣೆ ಸುದ್ದಿ ಗಮನಿಸಿದ್ದೇನೆ. ನಾನು ಮೇಲಿಂದ ಮೂರನೇ ಸ್ಥಾನದಲ್ಲಿದ್ದೇನೆ. ಬದಲಾವಣೆ ಮಾಡೋದಕ್ಕೆ ನಾನಿದ್ದೀನಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಮಾತನಾಡಿರುವ ಬಿಎಲ್ ಸಂತೋಷ್, ಲೋಕಸಭೆ ಚುನಾವಣೆವರೆಗೂ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ ಎಂಬ ಮಾಹಿತಿ ನೀಡಿದ್ದಾರೆ ಎಂದೂ ಹೇಳಲಾಗಿದೆ. ಇನ್ನು ಪುತ್ತೂರಿನಲ್ಲಿ ಬಿಜೆಪಿಯ ಸೋಲಿಗೆ ಪ್ರತಿಕ್ರಿಯಿಸಿದ ಸಂತೋಷ್, ‘ ಅಲ್ಲಿ ಹಿಂದಿನಿಂದಲೂ ರಾಮ ಭಟ್, ಶಕುಂತಲಾ ಶೆಟ್ಟಿ ಎಲ್ಲ ಬಂಡಾಯ ಎದ್ದಿದ್ದಾರೆ. ಈಗ ಅರುಣ್ ಪುತ್ತಿಲ ಸರದಿ ಅದರಲ್ಲೇನು ನಷ್ಟ ಆಯ್ತು..? ಅದೆಲ್ಲ ಇದ್ದದ್ದೇ..ಎಂದು ಹಗುರವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗುತ್ತಿದೆ. ನಳಿನ್ಗೆ ಮತ್ತೆ ಅವಕಾಶ ನೀಡಿದರೆ ಬಿಜೆಪಿಯಲ್ಲಿ ಬಂಡಾಯ ಎದ್ದರೂ ಕ್ಯಾರೆ ಅನ್ನುವ ಸ್ಥಿತಿಯಲ್ಲಿ ಇಲ್ಲ ಎನ್ನುವ ಮುನ್ಸೂಚನೆ ದೊರೆತಿದೆ ಅನ್ನುವ ಮಾಹಿತಿಗಳು ಕೂಡ ಲಭ್ಯವಾಗಿದೆ.