ನ್ಯೂಸ್ ನಾಟೌಟ್: ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದೊಂದು ಕನಸಿರುತ್ತೆ. ಕೆಲವರು ಹಣದ ಹಿಂದೆ ಹೋದ್ರೆ ಇನ್ನೂ ಕೆಲವರು ತಾವು ನಂಬಿರುವ ಫ್ಯಾಶನ್ ಹಿಂದೆ ಹೋಗ್ತಾರೆ. ಇಲ್ಲೊಬ್ಬ ಇಂಜಿನೀಯರ್ ಯುವಕ ತನ್ನ ಕೆಲಸವನ್ನು ಬಿಟ್ಟು ಮದುವೆಯ ಬಳಿಕ ಪತ್ನಿ ಜತೆ ಹಳ್ಳಿಗೆ ಬಂದು ಕೃಷಿಗೆ ಇಳಿದಿದ್ದಾರೆ. ಗಂಡನ ಕೃಷಿ ಕಾಯಕಕ್ಕೆ ಪತ್ನಿ ಫ್ಲ್ಯಾಟ್ ನಿಂದ ಹಳ್ಳಿಗೆ ಬಂದು ಸಾಥ್ ನೀಡಿದ್ದಾರೆ!.
ಇಂದು ನಗರಕ್ಕೆ ವಲಸೆ ಹೋಗುತ್ತಿರುವ ಬಹು ದೊಡ್ಡ ಯುವ ಸಮೂಹದ ಎದುರು ಈ ಜೋಡಿ ವಿಶಿಷ್ಟವಾಗಿ ನಿಲ್ಲುತ್ತಾರೆ. ಭಾರತದ ಕೃಷಿ ಪರಂಪರೆ, ಇಲ್ಲಿನ ಆಚಾರ ವಿಚಾರ ವಿಭಿನ್ನತೆಯ ಸೊಬಗನ್ನು ಅನುಭವಿಸುವುದೇ ಖುಷಿ. ಅಂತಹ ಮುದ ನೀಡುವ ಹಳ್ಳಿಯ ಪರಂಪರೆ ಕೃಷಿ ಬದುಕಿನಲ್ಲಿ ಅದೇನೋ ವಿಶೇಷತೆ ಇದೆ. ಅದರಲ್ಲಿ ನನ್ನನ್ನು ನಾನು ಕಾಣಬೇಕು ಅನ್ನುವ ಸಂಕಲ್ಪದೊಂದಿಗೆ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಪ್ರಸಾದ್ ಮತ್ತು ಅವರ ಪತ್ನಿಅಕ್ಷತಾ ಕೃಷಿ ಭೂಮಿಗೆ ಧುಮುಕಿದ್ದಾರೆ.
ಇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತ ‘ಮಹೇಶ್ ಪುಚ್ಚಪ್ಪಾಡಿ’ ಹೀಗೆ ವಿವರಿಸಿದ್ದಾರೆ- “ನನ್ನ ಮಿತ್ರ, ಹಿತೈಷಿ ನನ್ನೂರಿನ ಸುಬ್ರಹ್ಮಣ್ಯ ಪ್ರಸಾದ ಅವರ ವಿವಾಹ ಕಾರ್ಯಕ್ರಮ. ಹುಡುಗ ಎಂಟೆಕ್ ಪದವೀಧರ. ಕೆಲವು ಸಮಯ ಉಪನ್ಯಾಸಕನಾಗಿ ಕೆಲಸ ಮಾಡಿದ್ದ. ಕೃಷಿ ಭೂಮಿ ಉಳಿಸಬೇಕು, ಬೆಳೆಸಬೇಕು ಎಂದು ಕೃಷಿಗೆ ಬಂದ. ಎಲ್ಲೇ ಕೃಷಿ ಕಾರ್ಯಕ್ರಮ ಇರಲಿ ಅಲ್ಲಿನ ಮಾಹಿತಿ ಪಡೆಯುತ್ತಾನೆ. ಆಧುನಿಕ ಕೃಷಿಯ ಬಗ್ಗೆ ಅಧ್ಯಯನ ಮಾಡುತ್ತಾನೆ. ಕೃಷಿ, ಭಾರತೀಯ ಸಂಪ್ರದಾಯ, ಪರಂಪರೆ ಎಂಬ ಸಿದ್ಧಾಂತದ ಅನುಯಾಯಿಯೂ ಆಗಿದ್ದ. ಕೃಷಿಯಲ್ಲಿ ತೊಡಗಿಸಿಕೊಂಡ ಕೆಲ ಸಮಯದ ಬಳಿಕ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದಾನೆ. ಎಷ್ಟೇ ವಿದ್ಯಾವಂತನಾದರೂ ಕೃಷಿಯಲ್ಲಿ ಸಾಕಷ್ಟು ಆದಾಯ ಇದ್ದರೂ ಕೃಷಿಕನ ಕಡೆಗೆ ಮನಸ್ಸು ಮಾಡದ ಸಮಾಜ ಇದು. ಈ ಎಲ್ಲಾ ಸವಾಲುಗಳ ನಡುವೆ ಈತನಿಗೆ ಮಂಗಳೂರು ನಗರದಲ್ಲಿರುವ ಯುವತಿಯ ಜೊತೆ ವಿವಾಹ.
ಪ್ರವಾಹದ ವಿರುದ್ಧದ ಆಯ್ಕೆ ಇಬ್ಬರದೂ.ಎಲ್ಲರೂ ವಿದ್ಯಾವಂತರಾಗಿ ನಗರಕ್ಕೆ ತೆರಳಿದರೆ, ಸುಬ್ರಹ್ಮಣ್ಯ ಪ್ರಸಾದ ಕಲಿತು ಕೃಷಿಗೆ ಬಂದ. ಹಳ್ಳಿಯಿಂದ ನಗರದ ಪ್ಲಾಟ್ ಗೆ ತೆರಳುವ ಹುಡುಗಿಯರು ಹೆಚ್ಚಾಗಿರುವಾಗ ಪ್ಲಾಟ್ ನಿಂದ ಹಳ್ಳಿಗೆ ಬಂದ ಯುವತಿ.ಇಬ್ಬರ ಆಯ್ಕೆಯೂ ಪ್ರವಾಹದ ವಿರುದ್ಧ. ಸವಾಲುಗಳ ನಡುವೆಯೂ ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭ. ಸುಬ್ರಹ್ಮಣ್ಯ ಪ್ರಸಾದ ಈ ಸವಾಲನ್ನು ಮೊದಲೇ ತೆಗೆದುಕೊಂಡಿದ್ದಾನೆ. ಅದು ಅವನಿಗೆ ಅನಿವಾರ್ಯವೂ ಆಗಿರಬಹುದು. ಆದರೆ ಎಂಟೆಕ್ ಪದವಿಯಾಗಿ ಹಳ್ಳಿಯಲ್ಲಿ ನಿಲ್ಲುವ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುವುದು ಸುಲಭ ಅಲ್ಲ. ಅವನ ಹುಡುಗಿಯೂ ಅಂತಹದ್ದೇ ನಿರ್ಧಾರ ತೆಗೆದುಕೊಂಡಿರಬೇಕು.
ಈಗ ಸಮಾಜ ಮಾಡಬೇಕಾದ್ದು ಇಷ್ಟೇ, ಅವರ ಜೊತೆ ಮಾತನಾಡುವಾಗ, ನೀನೇನು ಹಳ್ಳಿಗೆ ಬಂದೆ , ನೀನೇನು ಹಳ್ಳಿಯಲ್ಲಿ ಉಳಿದೆ, ಎಂತ ಕೆಲಸ , ಕಷ್ಟ ಆಗಲಿಕ್ಕಿಲ್ಲವಾ ? ಹೀಗೇ ಹತ್ತಾರು ಪ್ರಶ್ನೆ ಕೇಳಿ ಅವರನ್ನು ಮಾನಸಿಕವಾಗಿ ಸೋಲಿಸಬೇಡಿ. ಅವರ ಇಬ್ಬರ ಆಯ್ಕೆ ಸರಿಯಾಗಿದೆ. ನಾವೆಲ್ಲಾ ಇದನ್ನು ಆದರ್ಶ ಎಂದು ಹೇಳಬೇಕಾಗಿಲ್ಲ, ಮಾದರಿ ಅಂತ ಹೇಳೋಣ ಅಷ್ಟೇ. ಆದರ್ಶ ಏಕೆ ಅಲ್ಲ ಅಂದರೆ ಎಲ್ಲರೂ ಈ ರೀತಿ ಮಾಡಲಾರರು. ಮಾದರಿ ಏಕೆಂದರೆ ಸವಾಲನ್ನು ಮೆಟ್ಟಿ ಅವರು ಕೈಗೊಂಡ ನಿರ್ಧಾರ. ಗ್ರಾಮೀಣ ಭಾರತದಲ್ಲಿ ಇಂತಹ ಯುವ ಮನಸ್ಸುಗಳು ಹೆಚ್ಚಾಗಲಿ ಎನ್ನುವ ಆಶಯ ವ್ಯಕ್ತಪಡಿಸೋಣ. ಹೀಗೆ ವಿವರಿಸಿದ್ದಾರೆ ಲೇಖಕ ಮಹೇಶ್ ಪುಚ್ಚಪ್ಪಾಡಿ.