ನ್ಯೂಸ್ ನಾಟೌಟ್: ಸಿದ್ದರಾಮಯ್ಯ ಸರ್ಕಾರ ಘೋಷಿಸಿರುವ ಪಂಚ ಯೋಜನೆಗಳ ಪೈಕಿ ಜಾರಿಯಾದ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಸ್ಕೀಂ ಹೊರತು ಪಡಿಸಿ ಉಳಿದ ಯೋಜನೆಗಳ ಜಾರಿ ವಿಳಂಬವಾಗುವ ಸಾಧ್ಯತೆ ಕಂಡು ಬರುತ್ತಿದೆ. ಜುಲೈ ತಿಂಗಳಿನಿಂದ ಘೋಷಿಸಿರುವ ಅನ್ನ ಭಾಗ್ಯವೂ ಜಾರಿಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಗಳ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಪ್ರಕಟಿಸಿತ್ತು. ಈಗಾಗಲೇ ಐದು ಕೆಜಿಯನ್ನು ನೀಡಲಾಗುತ್ತಿತ್ತು. ಹೆಚ್ಚುವರಿಯಾಗಿ ನೀಡಬೇಕಾಗಿರುವ ಐದು ಕೆಜಿಯನ್ನು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತೀಯ ಆಹಾರ ನಿಗಮದಿಂದ ಪಡೆದು ಪಡಿತರ ವ್ಯವಸ್ಥೆಯ ಮೂಲಕ ಹಂಚುವುದು ಅದರ ಉದ್ದೇಶವಾಗಿತ್ತು. ಆದರೆ, ಕೇಂದ್ರ ಸರಕಾರದ ಬದಲಾದ ನೀತಿಯಿಂದಾಗಿ ಎಫ್ಸಿಐ ಮೂಲಕ ಅಕ್ಕಿ ಸಿಗುವುದಿಲ್ಲ. ಇದೀಗ ಕೇಂದ್ರ ಸರಕಾರದ ಮೇಲೆ ಆರೋಪ ಮಾಡುತ್ತಿರುವ ಕಾಂಗ್ರೆಸ್ ಈ ರಾಜಕೀಯದ ಜತೆಗೇ ಅನ್ಯ ರಾಜ್ಯಗಳಿಂದ ಖರೀದಿಯೂ ಸೇರಿ ಬೇರೆ ದಾರಿಗಳನ್ನು ಹುಡುಕುತ್ತಿದೆ.
ಆದರೆ, ಇದೆಲ್ಲವೂ ಅಷ್ಟು ಸರಳವಾಗಿ ನಡೆಯುವ ಸಂಗತಿಗಳಲ್ಲ. ಹಾಗಾಗಿ ಅದು ಘೋಷಣೆ ಮಾಡಿದಂತೆ ಜುಲೈ ತಿಂಗಳಿನಿಂದಲೇ ಅದನ್ನು ಪಡಿತರ ವ್ಯವಸ್ಥೆಯ ಮೂಲಕ ಹಂಚುವುದು ಸಾಧ್ಯವಿಲ್ಲ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡಾ ಹೆಚ್ಚುವರಿ ಅಕ್ಕಿ ವಿತರಣೆ ಜುಲೈ ತಿಂಗಳಿನಿಂದ ಆರಂಭವಾಗುವ ಸಾಧ್ಯತೆಗಳು ಇಲ್ಲ ಎಂದೇ ಹೇಳಿದ್ದಾರೆ. ಇದೇ ವೇಳೆ ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ಸಹಾಯಧನ ನೀಡುವ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್ 15ರಿಂದ ಆರಂಭವಾಗಬೇಕಾಗಿತ್ತು. ಆದರೆ, ತಾಂತ್ರಿಕ ದೋಷದ ಆತಂಕ, ಇನ್ನೂ ಅಂತಿಮವಾಗದ ತಂತ್ರಾಂಶ ಮತ್ತಿತರ ಕಾರಣದಿಂದಾಗಿ ವಿಳಂಬವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಹೇಳುವಂತೆ ಅರ್ಜಿ ಸ್ವೀಕಾರ ಆರಂಭ ಇನ್ನೂ ನಾಲ್ಕೈದು ದಿನ ತಡವಾಗಲಿದೆ. ಗೃಹ ಜ್ಯೋತಿ ಅರ್ಜಿ ಸ್ವೀಕಾರಕ್ಕೂ ತಾಂತ್ರಿಕ ಅಡೆತಡೆಗಳು ಇರುವುದರಿಂದ ಅದನ್ನೂ ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಆನ್ ಲೈನ್ ಅರ್ಜಿ ಸಲ್ಲಿಕೆ ವ್ಯವಸ್ಥೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಅದಕ್ಕೆ ಪ್ರತ್ಯೇಕ ಆ್ಯಪ್ ರೆಡಿ ಮಾಡಬೇಕಾಗಿದೆ. ಇದಕ್ಕೆ ಸಮಯ ಬೇಕು ಎಂದು ಇ ಆಡಳಿತ ಹೇಳಿದೆ. ಹೀಗಾಗಿ ಅದೆಲ್ಲವೂ ವಿಳಂಬ ಗತಿಯಲ್ಲೇ ಇರಲಿದೆ.