ನ್ಯೂಸ್ ನಾಟೌಟ್ : ಚಿರತೆ ಶವ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ (ಬಿಟಿಆರ್) ಅಧಿಕಾರಿಗಳು ಭದ್ರತಾ ಸಿಬ್ಬಂದಿಯನ್ನು ಮೈಸೂರಿನ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ (Bandipur Tiger Reserve) ಪ್ರದೇಶದಲ್ಲಿ ಸೋಮವಾರ ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಾಯಿಯ ಶವಕ್ಕೆ ವಿಷ ಹಾಕಿ ಇಡಲಾಗಿತ್ತು. ಇದನ್ನು ಮೂರು ಚಿರತೆಗಳು ತಿಂದು ಸಾವನ್ನಪ್ಪಿದ್ದವು. ಚಿರತೆಯ ಶವದ ಮರಣೋತ್ತರ ಪರೀಕ್ಷೆಯಲ್ಲಿ ವಿಷ ಸೇವನೆ ಮಾಡಿ ಸಾವನ್ನಪ್ಪಿರೋದಾಗಿ ರಿಪೋರ್ಟ್ ಬಂದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡು ವಿಚಾರಣೆ ನಡೆಸಿದ್ದರು.
ಗದ್ದೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ದ ರಮೇಶ್ ತನ್ನ ಕೆಲಸದ ಸ್ಥಳದಲ್ಲಿ ಸಾಕಿದ್ದ ನಾಯಿಯ ಮೃತದೇಹಕ್ಕೆ ವಿಷ ಬೆರೆಸಿರುವುದನ್ನು ಒಪ್ಪಿಕೊಂಡಿದ್ದಾನೆ. ಚಿರತೆಗಳು ಬಂದು ನನ್ನ ಸಾಕು ನಾಯಿಯನ್ನು ಕೊಂದಿತ್ತು. ಹೀಗಾಗಿ ನಾಯಿಯ ಶವದ ಮೇಲೆ ಕೀಟನಾಶಕ ವಿಷ ಬೆರೆಸಿ ಇಟ್ಟಿದ್ದೆ ಎಂದು ಆತ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.